ADVERTISEMENT

ಐಗೂರಿನಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 6:32 IST
Last Updated 22 ಜುಲೈ 2013, 6:32 IST

ಸೋಮವಾರಪೇಟೆ: ಸಮೀಪದ ಐಗೂರಿನಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯ ಭೀತಗೊಳಿಸಿವೆ.
ಭಾನುವಾರ ಉಕ್ಕಿ ಹರಿಯುತ್ತಿರುವ ಚೋರನಹೊಳೆ ದಾಟಿದ ಕಾಡಾನೆಗಳು ಅರಣ್ಯ ಪ್ರದೇಶಕ್ಕೆ ತೆರಳಲು ಪ್ರಯತ್ನಿಸುತ್ತಿವೆ. ಸುಮಾರು 8 ಕಾಡಾನೆಗಳ ಹಿಂಡಿನಲ್ಲಿ ಮರಿ ಆನೆಯೂ ಇದೆ. ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿರುವು ದರಿಂದ ಹೊಳೆ ದಾಟಲು ಆನೆಗಳಿಗೆ ಕಷ್ಟವಾಗುತ್ತಿದೆ. ಯಡವನಾಡು ಮೀಸಲು ಅರಣ್ಯದಿಂದ, ಹೊಳೆಯ ಇನ್ನೊಂದು ಭಾಗದ ಟಾಟಾ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಆನೆಗಳು, ಕಳೆದ ಕೆಲ ದಿನಗಳಿಂದ ಮಳೆ ಹೆಚ್ಚಾಗಿ ಬೀಳುತ್ತಿರುವುದರಿಂದ ಹರಸಾಹಸಪಡುತ್ತಿವೆ.

ಭಾನುವಾರ ಬೆಳಿಗ್ಗಿನಿಂದ ಹೊಳೆದಂಡೆ ಹತ್ತಿರ ಬಂದು ನಿಂತಿರುವ ಕಾಡಾನೆಗಳು, ನೀರಿನ ಹರಿವು ಕಡಿಮೆಯಾಗು ವುದನ್ನು ಕಾಯುತ್ತಿದ್ದವು. ಮಧ್ಯಾಹ್ನದ ವರೆಗೂ, ರಭಸ ಕಡಿಮೆಯಾದಾಗ ಮೂರು ಕಾಡಾನೆಗಳು ಹರಸಾಹಸ ಮಾಡಿ ಹರಿಯುವ ನೀರಿಗೆ ಧುಮುಕಿ ಈಜಿ ದಡ ಸೇರಿದವು. ವಿಷಯ ತಿಳಿದ ಸ್ಥಳೀಯರು ಹೊಳೆ ದಂಡೆಗೆ ತೆರಳಿ ಬೊಬ್ಬೆ ಹೊಡೆಯಲು ಪ್ರಾರಂಭಿಸಿದರು.

ಸ್ಥಳಕ್ಕೆ ಆಗಮಿಸಿದ ಸೋಮವಾರಪೇಟೆ ಆರ್‌ಎಫ್‌ಒ ಕಾರ್ಯಪ್ಪ ನೇತೃತ್ವದ ತಂಡ, ಉಳಿದ ಕಾಡಾನೆಗಳನ್ನು ಪಟಾಕಿ ಸಿಡಿಸಿ ಪ್ರಯತ್ನಿಸಿದರು. ಸಂಜೆ ಏಳುಗಂಟೆ ತನಕ ಹೊಳೆದಂಡೆಯಿಂದ ಕಾಡಾನೆಗಳು ಕದಲಲಿಲ್ಲ. ಮುಖ್ಯರಸ್ತೆ ಯಲ್ಲೇ ಕಾಡಾನೆಗಳು ತೆರಳಬೇಕಾಗಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.