ADVERTISEMENT

ಐತಿಹಾಸಿಕ ದೇವಾಲಯಕ್ಕೆ ಕಾಯಕಲ್ಪ

ಶ್ರೀಕಾಂತ ಕಲ್ಲಮ್ಮನವರ
Published 1 ಅಕ್ಟೋಬರ್ 2012, 8:15 IST
Last Updated 1 ಅಕ್ಟೋಬರ್ 2012, 8:15 IST

ಮಡಿಕೇರಿ: ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಎದುರು ಇರುವ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಬಾಲಾಂಜನೇಯ ಗುಡಿಯ ಜೀರ್ಣೋದ್ಧಾರಕ್ಕೆ ರೂ 1.23 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧವಾಗಿದ್ದು, ಅಕ್ಟೋಬರ್ 24ರಂದು ಜೀರ್ಣೋ ದ್ಧಾರ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ. 

 ಕೇವಲ ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ರಾಜ್ಯದಲ್ಲೂ ಅತ್ಯಂತ ಪುರಾತನ ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ಚೋಳರ ಕಾಲದಲ್ಲಿ ಇದರ ನಿರ್ಮಾಣವಾಗಿದೆ ಎನ್ನುವ ಐತಿಹ್ಯವಿದೆ. ಅತ್ಯಂತ ಹಳೆಯರಾಗಿರುವ ಕಾರಣ ದೇವಾಲಯವು ಅಲ್ಲಲ್ಲಿ ಶಿಥಿಲಗೊಂಡಿತ್ತು. ಗರ್ಭಗುಡಿಯಲ್ಲೂ ಮಳೆ ನೀರು ಸೋರುವ ಹಂತಕ್ಕೆ ತಲುಪಿತ್ತು.

ಇಂತಹ ಸ್ಥಿತಿಯಲ್ಲಿರುವ ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲು ಧಾರ್ಮಿಕ ದತ್ತಿ ಇಲಾಖೆ ನಿರ್ಣಯ ಕೈಗೊಂಡಿದೆ. ಇದರನ್ವಯ ಶ್ರೀ ಓಂಕಾರೇಶ್ವರ ದೇವಾಲಯದ ಸಮಿತಿಯು ಕ್ರಿಯಾಯೋಜನೆ ರೂಪಿಸಿದೆ.
ಸಮಿತಿಯ ಗೌರವಾಧ್ಯಕ್ಷರಾಗಿರುವ ವಿಧಾನಸ ಭಾಧ್ಯಕ್ಷ ಕೆ.ಜಿ. ಬೋಪಯ್ಯ, ಅಧ್ಯಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರ  ಕ್ರಿಯಾ ಯೋಜನೆ ರೂಪಿಸಿದ್ದಾರೆ.

ದೇವಾಲಯವನ್ನು ಪೂರ್ಣ ಶಿಲೆಗಳಿಂದಲೇ ನಿರ್ಮಿಸಲು ಉದ್ದೇಶಿಸಲಾಗಿದೆ. ಗರ್ಭಗುಡಿ, ನೈವೇದ್ಯ ಕೊಠಡಿ, ತೀರ್ಥಬಾವಿ, ಅರ್ಚಕರಿಗೆ ವಸತಿಗೃಹ ಸೇರಿದಂತೆ ಭಕ್ತರ ಅನುಕೂಲಕ್ಕಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಿಯಾಯೋಜನೆ ರಚಿಸಲಾಗಿದೆ.

ಜೀರ್ಣೋದ್ಧಾರ ಕಾಮಗಾರಿಗಳ ನೀಲನಕ್ಷೆ ಯನ್ನು ಪುತ್ತೂರಿನ ಶಿಲ್ಪಿ ವ್ಯಾಸರಾಯ ಅವರು ರಚಿಸಿದ್ದು, ಗರ್ಭಗುಡಿ ಕಾಮಗಾರಿಯ ಟೆಂಡರ್ ಅನ್ನು ಶೃಂಗೇರಿಯ ಶ್ರೀ ವಿದ್ಯಾಭಾರತಿ ವೇದಿಕ್ ಆರ್ಕಿಟೆಕ್ಟ್ ಸಂಸ್ಥೆಯು ಪಡೆದುಕೊಂಡಿದ್ದು, ಸುಮಾರು ಒಂದು ವರ್ಷದ ಒಳಗೆ ಪೂರ್ಣ ಗೊಳ್ಳುವ ನಿರೀಕ್ಷೆ ಇದೆ.

ತಾಂತ್ರಿಕ ಸಲಹೆಗಾರರಾಗಿ ಲೋಕೋಪಯೋಗಿ ಇಲಾಖೆಯ ನಗರ ಯೋಜನಾ ನಿರ್ದೇಶಕ ಸತ್ಯನಾರಾಯಣ ರಾವ್ ನೇಮಕಗೊಂಡಿದ್ದಾರೆ.

ಮನವಿ: ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರವು ರೂ 1.23 ಕೋಟಿ ಹಣ ಮಂಜೂರು ಮಾಡಲು ಒಪ್ಪಿಕೊಂಡಿದೆ. ಜೀರ್ಣೋದ್ಧಾರ ಕಾರ್ಯವು ದೊಡ್ಡಪ್ರಮಾಣದಲ್ಲಿ ನಡೆಯುತ್ತಿರುವ ಕಾರಣ ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದೆ. ಭಕ್ತರು ತಮ್ಮ ಶಕ್ತ್ಯಾನುಸಾರ ಕಾಣಿಕೆ ನೀಡಬೇ ಕೆಂದು ದೇವಾಲಯದ ಪಾರುಪತ್ಯಗಾರ ಚಿ.ನಾ. ಸೋಮೇಶ್ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.