ADVERTISEMENT

ಕಂದಾಯ ವಸೂಲಿಗೆ ಜಿ.ಪಂ. ಅಧ್ಯಕ್ಷ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 10:15 IST
Last Updated 23 ಫೆಬ್ರುವರಿ 2012, 10:15 IST

ಕುಶಾಲನಗರ:  ಗ್ರಾಮೀಣ ಪ್ರದೇಶದ ರೈತರು ಹಾಗೂ ಜನಸಮಾನ್ಯರ ಅಭಿವೃದ್ಧಿಗೆ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಬುಧವಾರ ಹೇಳಿದರು.

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಅವರು ಮಾತನಾಡಿ ಗ್ರಾಮ ಪಂಚಾಯಿತಿಯ ಆದಾಯದ ಮೂಲವಾಗಿರುವ ಮನೆ ಮತ್ತು ನೀರಿನ ಕಂದಾಯವನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳು ನೇರವಾಗಿ ಫಲಾನುಭವಿಗೆ ತಲುಪಿಸುವ ಉದ್ದೇಶದಿಂದ ಜನಸಂಪರ್ಕ ಸಭೆಗಳನ್ನು ಗ್ರಾಮಮಟ್ಟದಲ್ಲಿ ನಡೆಸಲಾಗುತ್ತಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಅವರು  ಹೇಳಿದರು.

ಪಂಚಾಯಿತಿಗೆ ರೂ.10 ಲಕ್ಷದಷ್ಟು ಕಂದಾಯ ಬಾಕಿ ಇರುವುದರ ಬಗ್ಗೆ ಪಿಡಿಓ ಎಚ್.ಎಸ್.ಬಾಬು ಮಾಹಿತಿ ಪಡೆದು ಜಿ.ಪಂ. ಅಧ್ಯಕ್ಷರು, ಬಾಕಿಯಿರುವ ಕಂದಾಯವನ್ನು ಮುಂದಿನ ಮಾರ್ಚ್ ಒಳಗೆ ವಸೂಲಿ ಮಾಡಬೇಕು ಎಂದು ಸೂಚನೆ ನೀಡಿದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಸಂಧ್ಯಾಸುರಕ್ಷಾ, ಅಂಗವಿಕಲ ವೇತನ, ವಿಧವಾ ವೇತನ ಯೋಜನೆಯಡಿ ಮಾಸಿಕ ಗೌರವ ಧನ ಬಿಡುಗಡೆಯಾಗದೇ ಅನೇಕ ತಿಂಗಳೇ ಕಳೆದಿದ್ದು, ಇದರಿಂದ ಗ್ರಾಮೀಣ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಾಜಿ ಗ್ರಾ.ಪಂ. ಸದಸ್ಯ ಗೋವಿಂದಪ್ಪ ಹೇಳಿದರು.

ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ, ಓಂಕಾರ ಬಡಾವಣೆಗಳಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಬಡಾವಣೆಯ ನಿವಾಸಿಗಳು ಮನವಿ ಮಾಡಿದರು. ಗ್ರಾ.ಪಂ. ಅಧ್ಯಕ್ಷೆ ಕಮಲಾ ರಮೇಶ್ ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ.ಸದಸ್ಯೆ ಚಿತ್ರಕಲಾ ರಾಜೇಶ್, ತಾ.ಪಂ. ಸದಸ್ಯ ಸತೀಶ್, ಗ್ರಾ.ಪಂ. ಉಪಾಧ್ಯಕ್ಷ ಎಂ.ಎಸ್.ಶಿವಾನಂದ್, ತಾ.ಪಂ. ಇ.ಓ. ಚಂದ್ರಶೇಖರ್, ಗ್ರಾ.ಪಂ. ಸದಸ್ಯರಾದ ಎಂ.ಎಸ್.ರಾಜೇಶ್, ಬಿ.ಕೆ.ಚಲುವರಾಜು, ಗಣಪತಿ, ಚಲುವಪ್ಪ, ಗೋವಿಂದರಾಜ್ ಪದ್ಮ, ಪ್ರಸನ್ನ, ಕಾರ್ಯದರ್ಶಿ ಮಂಜೂರ್ ಖಾನ್ ಉಪಸ್ಥಿತರಿದ್ದರು.
ವಿವಿಧ ಅಧಿಕಾರಿಗಳು ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.