ADVERTISEMENT

ಕಾಂಗ್ರೆಸ್‌ಗೆ ಅಧಿಕಾರ ಚುಕ್ಕಾಣಿ: ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 5:08 IST
Last Updated 8 ಏಪ್ರಿಲ್ 2013, 5:08 IST

ಮಡಿಕೇರಿ: `ಟಿಕೆಟ್ ಸಿಗದಿದ್ದರಿಂದ ಬೇಸರ ಮಾಡಿಕೊಂಡಿರುವವರನ್ನು ಭೇಟಿ ಮಾಡಿ, ಅವರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದೇನೆ' ಎಂದು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆದಿರುವ ಕೆ.ಎಂ. ಲೋಕೇಶ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ದೊಡ್ಡ ಪಕ್ಷವಾಗಿರುವುದರಿಂದ ಸಹಜವಾಗಿ ಟಿಕೆಟ್ ಆಕಾಂಕ್ಷೆಗಳು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ. ಪ್ರತಿಯೊಬ್ಬ ಆಕಾಂಕ್ಷಿಯ ಸಾಮರ್ಥ್ಯವನ್ನು ಕಳೆದ 5- 6 ತಿಂಗಳ ಹಿಂದೆಯೇ ಪಕ್ಷದ ವರಿಷ್ಠರು ಒರೆಗೆ ಹಚ್ಚಿ, ಟಿಕೆಟ್ ಹಂಚಿದ್ದಾರೆ. ಈ ಸಲ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಟಿಕೆಟ್ ಸಿಗದಿದ್ದರಿಂದ ಮನನೊಂದಿರುವವರ ಮನವೊಲಿಸಿ, ಒಗ್ಗಟ್ಟಾಗಿ ಕೆಲಸ ಮಾಡುವಂತೆ ಅವರನ್ನು ಪ್ರೇರೇಪಿಸ ಲಾಗುವುದು. ಮಾಜಿ ಜಿ.ಪಂ. ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕೆ.ಎಂ. ಇಬ್ರಾಹಿಂ. ಸೇರಿದಂತೆ ಹಲವು ನಾಯಕರ ಜೊತೆ ಈಗಾಗಲೇ ಮಾತನಾಡಿದ್ದೇನೆ. ಎಲ್ಲರೂ ನಮ್ಮಂದಿಗೆ ಕೈಜೋಡಿಸು ವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

`ನಾನು ಮಡಿಕೇರಿ ತಾಲ್ಲೂಕಿನಲ್ಲಿ ಹೊಸಬನಾ ಗಿರಬಹುದು, ಆದರೆ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿದ್ದೇನೆ. ಕಳೆದ 15-16 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಇಲ್ಲಿಯವರೆಗೆ ಬಂದು ತಲುಪಿದ್ದೇನೆ' ಎಂದು ಹೇಳಿದರು.

ಟಿಕೆಟ್ ಸಿಗಲು ಸಂಸದರ ಪ್ರಭಾವವೆಷ್ಟು? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, `ಕಳೆದ 5-6 ತಿಂಗಳ ಹಿಂದೆ ಕೆಪಿಸಿಸಿ ಹಾಗೂ ಎಐಸಿಸಿ ತಂಡಗಳು ಪ್ರತ್ಯೇಕವಾಗಿ ಜಿಲ್ಲೆಗೆ ಬಂದು ಅಭ್ಯರ್ಥಿಗಳ ಬಗ್ಗೆ ಸಮೀಕ್ಷೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಬಹುತೇಕ ನಾಯಕರು ನನ್ನ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಹಿನ್ನೆಲೆಯಲ್ಲಿ ಸಂಸದ ಎಚ್.ವಿಶ್ವನಾಥ ಕೂಡ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ' ಎಂದು ಅವರು ಹೇಳಿದರು.

ಏ.15ರಂದು ನಾಮಪತ್ರ
ಮುಂದಿನ ವಾರ (ಏ.15) ನಾಮಪತ್ರ ಸಲ್ಲಿಸುತ್ತೇನೆ. ಇದಾದ ನಂತರ ಮಡಿಕೇರಿಯಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸುತ್ತೇವೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಸಾಧನೆಗಳನ್ನು ಮತದಾರರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಏ.13ರಂದು ಮಡಿಕೇರಿಯಲ್ಲಿ ನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ. ಕಾರ್ಯಕರ್ತರನ್ನು ಪ್ರೇರೇಪಿಸುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.