ADVERTISEMENT

‘ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ವಿಶ್ವಾಸ’

​ಪ್ರಜಾವಾಣಿ ವಾರ್ತೆ
Published 6 ಮೇ 2018, 11:42 IST
Last Updated 6 ಮೇ 2018, 11:42 IST

ಶನಿವಾರಸಂತೆ: ‘ಜನಪರ ಕಲ್ಯಾಣ ಕಾರ್ಯಕ್ರಮ, ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಜನತೆ ಎಂದಿನಂತೆ ಒಲವು ವ್ಯಕ್ತಪಡಿಸುತ್ತಿದ್ದಾರೆ’ ಎಂದು ಮುಖಂಡ ಟಿ.ಪಿ.ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಸಭೆಯಲ್ಲಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಪರವಾಗಿ ಮತ ಯಾಚಿಸಿ ಅವರು ಮಾತನಾಡಿದರು.

‘ಹಲವಾರು ಯೋಜನೆಗಳ ಮೂಲಕ ರಾಜ್ಯ ಹಾಗೂ ಜನತೆಯ ಅಭಿವೃದ್ಧಿಗೆ ಬದ್ಧವಾಗಿರುವ  ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ. ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನೇ ಕಾಪಿ ಮಾಡಿದ ಬಿಜೆಪಿ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸಲಿಲ್ಲ. ಹಣೆಗೆ ಬೊಟ್ಟಿಟ್ಟು, ಕೇಸರಿ ವಸ್ತ್ರ ಧರಿಸಿ ರಾಮನಾಮ ಜಪಿಸಿದ ಮಾತ್ರಕ್ಕೆ ದೇಶ ಉದ್ಧಾರವಾಗುವುದಿಲ್ಲ. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸುವ ಸಾಮರ್ಥ್ಯ ಕಾಂಗ್ರೆಸ್‌ಗೆ ಮಾತ್ರ ಇದೆ’ ಎಂದರು

ADVERTISEMENT

ಐಎನ್‌ಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ‘ಜಿಲ್ಲೆಯಲ್ಲಿ 24 ವರ್ಷಗಳಿಂದ ಗೆಲುವು ಸಾಧಿಸಿದ್ದರೂ ಬಿಜೆಪಿ ಶಾಸಕರಿಂದ ಜಿಲ್ಲೆ ಅಭಿವೃದ್ಧಿ ಕಾಣಲಿಲ್ಲ. ಪ್ರಧಾನಿ ಮೋದಿ ಅವರ ಘೋಷಣೆಗಳಾವುವೂ ಅನುಷ್ಠಾನಕ್ಕೆ ಬರಲಿಲ್ಲ. ಸಾಲಮನ್ನಾ ಬರಿ ನಾಟಕ’ ಎಂದು ವ್ಯಂಗ್ಯವಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಈ ಬಾರಿಯ ಚುನಾವಣೆ ರಾಜ್ಯದ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ. ಬಿಜೆಪಿ ಭ್ರಾಂತಿಗೆ ಒಳಗಾಗಿದೆ. ಮಾಧ್ಯಮಗಳು ಉದ್ಯಮಿಗಳ ಪಾಲಾಗಿದ್ದು, ಉದ್ಯಮಿಗಳು ಮೋದಿಯವರ ಕೈಗೊಂಬೆಗಳಾಗಿದ್ದಾರೆ ಎಂದು ಟೀಕಿಸಿದರು.

ಕೆಪಿಸಿಸಿ ಸದಸ್ಯ ವೆಂಕಪ್ಪಗೌಡ ಮಾತನಾಡಿ, ಪ್ರಧಾನಿ ಮೋದಿಯವರ ಕಪ್ಪು ಹಣ ವಾಪಸ್ಸು ತರುವ ಮಾತು ಬರೀ ಮಾತುಗಳಾಗಿ, ಫಲಾನುಭವಿಗಳ ಖಾತೆಗೆ 15 ಲಕ್ಷ ರೂಪಾಯಿ ತುಂಬಿಸುವ ಮಾತು ಹುಸಿಯಾಯಿತು. ಯಾವ ರಾಜ್ಯವೂ ಉಚಿತ ಅಕ್ಕಿ ನೀಡಲಿಲ್ಲ. ಕರ್ನಾಟಕದ ಜನತೆ ರಾಜ್ಯದ್ದು ಮಾತ್ರವಲ್ಲ; ದೇಶದ ಚರಿತ್ರೆಯನ್ನೂ ನೋಡಬೇಕು ಎಂದರು.

ಮುಖಂಡರಾದ ಚಂದ್ರಮೌಳಿ, ಬಿ.ಎಸ್.ಅನಂತಕುಮಾರ್, ಬಿ.ಕೆ.ಚಿನ್ನಪ್ಪ, ಲೋಕೇಶ್ ಕುಮಾರ್ ಮಾತನಾಡಿದರು.

ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸಿ.ಬಿ.ಅಬ್ಬಾಸ್, ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ರಂಗಸ್ವಾಮಿ, ಮುಖಂಡರಾದ ಎಸ್.ಕೆ.ವೀರಪ್ಪ, ಡಾ.ಉದಯಕುಮಾರ್, ಯಾಕೂಬ್, ಮಿಥುನ್, ಮಹೇಶ್, ಮಹಮ್ಮದ್ ಪಾಷಾ, ಶರತ್ ಶೇಖರ್, ಎಸ್.ಎಸ್.ಶಿವಾನಂದ್, ಸೈಯದ್ ಅಹ್ಮದ್, ಹನೀಫ್, ವಿ.ಟಿ.ನಾಗರಾಜ್, ಸುಬ್ಬಪ್ಪ, ಸೌಭಾಗ್ಯಲಕ್ಷ್ಮಿ, ಬಾನುರಿಜ್ವಾನ್, ರಾಜಮ್ಮ ಮತ್ತಿತರರು ಉಪಸ್ಥಿತರಿದ್ದರು.

ಬಹಿರಂಗ ಸಭೆಯ ಮೊದಲು ಕಾಂಗ್ರೆಸ್ ಮುಖಂಡರು ಭಾರತಿ ವಿದ್ಯಾಸಂಸ್ಥೆಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಮುಖ್ಯರಸ್ತೆಯಲ್ಲಿ ರೋಡ್ ಷೋ ನಡೆಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಪರ ಮತ ಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.