ADVERTISEMENT

ಕಾಡಾನೆ ದಾಳಿ: ಅಪಾರ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 10:07 IST
Last Updated 20 ಏಪ್ರಿಲ್ 2013, 10:07 IST

ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯ ಕೈಕಾಡು, ಬೇತು, ಹಳೇತಾಲೂಕು, ನೆಲಜಿ ಮತ್ತಿತರ ಗ್ರಾಮಗಳಲ್ಲಿ ಗುರುವಾರ ರಾತ್ರಿ ಕಾಡಾನೆ ಹಿಂಡು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಗುರುವಾರ ರಾತ್ರಿ ಸುಮಾರು 9.30 ಗಂಟೆಗೆ ವಿರಾಜಪೇಟೆ- ಮಡಿಕೇರಿ ಮುಖ್ಯ ರಸ್ತೆಯ ಕಾಕೋಟುಪರಂಬು ಮೈದಾನದಲ್ಲಿ ವಾಹನ ಚಾಲಕರಿಗೆ ಕಾಣಿಸಿಕೊಂಡ ಕಾಡಾನೆಗಳು ಪಾರಾಣೆ ಮೂಲಕ ಕೈಕಾಡು ಗ್ರಾಮ ಪ್ರವೇಶಿಸಿವೆ. ಗ್ರಾಮದ ಪಾಡೆಯಂಡ ಕುಟುಂಬಸ್ಥರ ಕಾಫಿ ತೋಟಗಳಿಗೆ ನುಗ್ಗಿ ನಷ್ಟ ಮಾಡಿವೆ. ಬೇತು ಗ್ರಾಮದ ಕಾಳೆಯಂಡ ಚಂಗಪ್ಪ ಅವರ ಬಾಳೆ ತೋಟ ಲೂಟಿ ಮಾಡಿದ ಆನೆಗಳು, ನೆಲಜಿ ಗ್ರಾಮದ ಚೆಟ್ಟಿಯಾರಂಡ ಮತ್ತು ಮಂಡೀರ ಕುಟುಂಬಸ್ಥರ ಕಾಫಿ ತೋಟದಲ್ಲಿ ತಂಗಿವೆ.
ಇಲ್ಲಿ ಮೂರು ಕಾಡಾನೆಗಳು ಇರುವ ಬಗ್ಗೆ ಶಂಕಿಸಲಾಗಿದ್ದು, ಎರಡು ಆನೆಗಳನ್ನು ಕಂಡಿದ್ದಾಗಿ ಗ್ರಾಮಸ್ಥರು ಹೇಳಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ನಾಪೋಕ್ಲು ಪೊಲೀಸರು ನೆಲಜಿ ಗ್ರಾಮಕ್ಕೆ ತೆರಳಿದ್ದು, ಆನೆ ಓಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಏಪ್ರಿಲ್ ತಿಂಗಳ ಕೊನೆಯಲ್ಲಿ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯ ಹಾಗೂ ಮತ್ತಿತರ ಭಾಗಗಳಲ್ಲಿ ಕಾಣಿಸಿಕೊಂಡ ಕಾಡಾನೆ ಹಿಂಡು ನಷ್ಟ ಉಂಟು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.