ADVERTISEMENT

ಕಾರ್ಯಪ್ಪಗೆ ಭಾರತ ರತ್ನಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 7:25 IST
Last Updated 5 ನವೆಂಬರ್ 2017, 7:25 IST
ಕೊಡಗು ಜಿಲ್ಲೆ, ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಜನರಲ್‌ ಕೆ.ಎಸ್‌.ತಿಮ್ಮಯ್ಯ ಅವರ ಪ್ರತಿಮೆಗಳನ್ನು ಶನಿವಾರ ಭೂಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅನಾವರಣಗೊಳಿಸಿದರು
ಕೊಡಗು ಜಿಲ್ಲೆ, ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಜನರಲ್‌ ಕೆ.ಎಸ್‌.ತಿಮ್ಮಯ್ಯ ಅವರ ಪ್ರತಿಮೆಗಳನ್ನು ಶನಿವಾರ ಭೂಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅನಾವರಣಗೊಳಿಸಿದರು   

ಮಡಿಕೇರಿ: ‘ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಭೂಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಭರವಸೆ ನೀಡಿದರು. ಕೊಡಗು ಜಿಲ್ಲೆ ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ, ಜನರಲ್‌ ಕೆ.ಎಸ್‌.ತಿಮ್ಮಯ್ಯ ಅವರ ಕಂಚಿನ ಪ್ರತಿಮೆಗಳನ್ನು ಶನಿವಾರ ಅನಾವರಣಗೊಳಿಸಿ ಮಾತನಾಡಿದರು.

‘ಕಾರ್ಯಪ್ಪ ಅವರು ಮೂರು ರಕ್ಷಣಾ ಪಡೆಗಳ ಪ್ರಥಮ ದಂಡನಾಯಕರಾಗಿದ್ದರು. ಆ ಸಂದರ್ಭದಲ್ಲಿ ಕಠಿಣ ಸವಾಲು ಎದುರಿಸಿ ಸೇನೆಯನ್ನು ಕಟ್ಟಿದ್ದ ಕೀರ್ತಿ ಅವರಿಗೆ ಸಲ್ಲಬೇಕು. ಅವರ ಕರ್ತವ್ಯ ನಿಷ್ಠೆ ಮಾದರಿಯಾಗಿದ್ದು ಭಾರತ ರತ್ನಕ್ಕೆ ಅರ್ಹರು. ಆದ್ಯತೆ ಮೇರೆಗೆ ಅವರನ್ನು ಪರಿಗಣಿಸಬೇಕೆಂದು ಸರ್ಕಾರವನ್ನು ಕೋರಲಾಗುವುದು. ಮತ್ತಷ್ಟು ವೀರ ಸೇನಾನಿಗಳು ಜಿಲ್ಲೆಯಿಂದ ಹುಟ್ಟಿ ಬರಲಿ’ ಎಂದು ಆಶಿಸಿದರು.

‘ಕೆ.ಎಸ್‌.ತಿಮ್ಮಯ್ಯ ಅವರ ‘ಸನ್ನಿಸೈಡ್‌’ ನಿವಾಸವನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗುತ್ತಿದ್ದು ₹ 10 ಲಕ್ಷ ನೆರವು ನೀಡಲಾಗುವುದು. ತಿಮ್ಮಯ್ಯ ಅವರ ಸಾಧನೆ, ಹಿರಿಮೆ– ಗರಿಮೆಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಿರ್ಮಾಣಗೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಕೆಲವು ರಾಜ್ಯಗಳಲ್ಲಿ ನಿವೃತ್ತಿ ವೇತನ ಪಡೆಯಲು ಸಮಸ್ಯೆ ಉಂಟಾಗುತ್ತಿದ್ದು ಪರಿಹರಿಸಲು ಪ್ರತ್ಯೇಕ ವಿಭಾಗ ಆರಂಭಿಸಲಾಗಿದೆ. ಸಮಸ್ಯೆಗೆ ಒಳಗಾದವರು ಇ–ಮೇಲ್‌ ಮೂಲಕ ಮಾಹಿತಿ ನೀಡಬಹುದು. ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವವರ ಮಕ್ಕಳ ಮದುವೆಗೆ ₹1 ಲಕ್ಷದವರೆಗೂ ಆರ್ಥಿಕ ಸಹಾಯ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.