ADVERTISEMENT

ಕೊಂಬಾಟ್‌ ನೃತ್ಯ ಪ್ರದರ್ಶನ

ಶ್ರದ್ಧಾಭಕ್ತಿಯಿಂದ ನೆರವೇರಿದ ಚೇರಳ ಭಗವತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 9:30 IST
Last Updated 5 ಮಾರ್ಚ್ 2018, 9:30 IST

ಮಡಿಕೇರಿ: ಜಿಲ್ಲೆಯ ಚೆಟ್ಟಳ್ಳಿಯ ಚೇರಳ ಭಗವತಿ ದೇವರ ವಾರ್ಷಿಕ ಉತ್ಸವವು ಭಾನುವಾರ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಭಕ್ತರು ಹೋವಯ್ಯ ಹೋ... ಹೋವಯ್ಯ ಹೋ... ಎಂದು ದೇವರನ್ನು ಪ್ರಾರ್ಥಿಸುತ್ತಾ ಕೊಂಬಾಟ್‌ ನೃತ್ಯ ಪ್ರದರ್ಶನ ಮಾಡಿದ್ದು ಆಕರ್ಷಕವಾಗಿತ್ತು.

ಫೆ. 27ರಂದು ಬೆಳಿಗ್ಗೆ 6.30ಕ್ಕೆ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಗ್ರಾಮದ ಪುರುಷರು ಹಬ್ಬದ ಕಟ್ಟು ಬಿದ್ದಲ್ಲಿಂದ ದೇವಾಲಯದಲ್ಲಿ ಬೆಳಿಗ್ಗೆ ಜಿಂಕೆಯ ಕೊಂಬು ಹಿಡಿದು ದೇವರ ದೀಪದ ಮುಂದೆ ಕೊಂಬಾಟ್ ನೃತ್ಯ ಪ್ರದರ್ಶನ ಮಾಡಿದ್ದರು.

ADVERTISEMENT

ಮಾರ್ಚ್ 2ರಂದು ಪಟ್ಟಣಿ ಹಬ್ಬವು ಸಂಪ್ರದಾಯದಂತೆ ನಡೆದಿತ್ತು. ಅಂದು 10 ವರ್ಷದ ಒಳಗಿನ ಹೆಣ್ಣು ಮಕ್ಕಳು ದೇವಾಲಯದಿಂದ ಕಳಶದ ನೀರು ತಂದು ಪೂಜೆ ಸಲ್ಲಿಸಿದ್ದರು. ಭಾನುವಾರ ಭಗವತಿ ದೇವರ ದೊಡ್ಡ ಹಬ್ಬ ನಡೆಯಿತು. ದೇವಿಯು ಹೂವಿನ ವಿಶೇಷ ಅಲಂಕಾರ ಹಾಗೂ ವಸ್ತ್ರಾಭರಣಗಳಿಂದ ಕಂಗೊಳಿಸುತ್ತಿದ್ದಳು.

ಊರಿನವರೆಲ್ಲ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ಚೇರಳ ತಮ್ಮಂಡ ಆನಂದ ಅವರ ಮನೆಯಿಂದ ಭಂಡಾರ ತಂದು ಪೂಜೆ ನೆರವೇರಿಸಿದರು. ದೇವಾಲಯದಲ್ಲಿ ಇಟ್ಟ ಜಿಂಕೆ ಕೊಂಬನ್ನು ಹಿಡಿದು 18 ಬಗೆಯ ಕೊಂಬಾಟ್‌ ನೃತ್ಯ ಪ್ರದರ್ಶನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.