ADVERTISEMENT

ಕೋಟೆಪೈಸಾರಿ ಕೆರೆಗೆ ಬೇಕಿದೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 4:00 IST
Last Updated 12 ಆಗಸ್ಟ್ 2012, 4:00 IST

ಸಿದ್ದಾಪುರ: ಇಲ್ಲಿಗೆ ಸಮೀಪದ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಪ್ರಸಿದ್ಧ ಕೆರೆಯೊಂದು ನಿರ್ವಹಣೆ ಕಾಣದೇ ಇತಿಹಾಸ ಪುಟ ಸೇರುವ ಹಂತ ತಲುಪಿದೆ. ವೀರರಾಜೇಂದ್ರ ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದ ಕೋಟೆ ಪೈಸಾರಿ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಕೆರೆಯಲ್ಲಿ ತ್ಯಾಜ್ಯಗಳು ಸೇರಿಕೊಳ್ಳುತ್ತಿದ್ದು, ಕೊಳಚೆಯಾಗಿ ಪರಿವರ್ತನೆಯಾಗುತ್ತಿದೆ.

ಚೆನ್ನನಕೋಟೆ ಗ್ರಾಮ ಪಂಚಾಯಿತಿ ಆಡಳಿತದ ಅಧೀನದಲ್ಲಿ ಬರುವ ಸುಮಾರು 7 ಕೆರೆಗಳಲ್ಲಿ ಕೋಟೆ ಪೈಸಾರಿಯೂ ಒಂದು. ಮೂರು ಎಕರೆ ವಿಸ್ತೀರ್ಣ ಹೊಂದಿರುವ ಕೋಟೆ ಪೈಸಾರಿ ಕೆರೆಯು ಈ ವ್ಯಾಪ್ತಿಯಲ್ಲಿ ಬರುವ ಸುಮಾರು 50 ಏಕರೆ ಗದ್ದೆಗಳಿಗೆ ಹಾಗೂ ಚೆನ್ನಯನಕೋಟೆ, ಹೊಲಮಾಳ, ಕಾಟಿಮುಟ್ಟಿ, ಚನ್ನಂಗಿ ಹೀಗೆ ಸುಮಾರು 4 ಹಳ್ಳಿಗಳಿಗೆ ನೀರುಣಿಸುತ್ತಿತ್ತು. ಕೆಲ ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ವತಿಯಿಂದ ಇಲ್ಲಿ ಮೀನು ಸಾಕಾಣೆ ಮಾಡಲಾಗುತ್ತಿತ್ತು. ಆದರೆ ಈಗ ಕೆರೆ ನಿರುಪಯುಕ್ತವಾಗಿದೆ.

ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಳೆದ ವರ್ಷ ಕೆರೆಯ ದುರಸ್ತಿಗೆ ರೂ.18 ಲಕ್ಷ ಬಿಡುಗಡೆಯಾಗಿತ್ತು. ಕೆರೆ ಅಭಿವೃದ್ಧಿ ಮತ್ತು ಹೂಳೆತ್ತುವ ಕಾಮಗಾರಿ ನಡೆದಿದೆ ಎಂದು  ಹೇಳಲಾಗುತ್ತಿದೆ. ಆದರೂ ಕೆರೆ ಮಾತ್ರ ಬದಲಾವಣೆ ಕಾಣದೆ ಬೃಹತ್ ಕೊಳಚೆ ಗುಂಡಿಯಾಗಿದೆ. ದಿನ ನಿತ್ಯ ಇಲ್ಲಿ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ.

ದಶಕದ ಹಿಂದೆ ಇಲ್ಲಿನ ಕಾಫಿ ಬೆಳೆಗಾರರು, ರೈತರು ಬೇಸಾಯಕ್ಕೆ ಇದೇ ಕೆರೆಯನ್ನು ಅವಲಂಬಿಸಿದ್ದರು. ನಿರ್ವಹಣೆಯ ಕೊರತೆಯಿಂದ ಕೆರೆ ಹೂಳು ತುಂಬಿಕೊಂಡಿದೆ. ಈ ಕೆರೆಯ ಪಕ್ಕದಲ್ಲಿ ಖಾಸಗಿಯವರು ನಿರ್ಮಿಸಿರುವ ಎರಡು ಕೆರೆಗಳು ಕಂಗೊಳಿಸುತ್ತಿವೆ.

ಜನ, ಜಾನುವಾರು ಮತ್ತು ಕೃಷಿಗೆ ಆಶ್ರಯವಾಗಿದ್ದ ಕೆರೆಯೊಂದು ವಿನಾಶದ ಅಂಚಿನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT