ADVERTISEMENT

ಕೋಳಿ ಮಾಂಸದಲ್ಲಿ ಹುಳು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 7:32 IST
Last Updated 11 ಅಕ್ಟೋಬರ್ 2017, 7:32 IST

ಸುಂಟಿಕೊಪ್ಪ: ಇಲ್ಲಿನ ಕೋಳಿ ಮಾಂಸದ ಮಾರುಕಟ್ಟೆಯಲ್ಲಿ ಹುಳದಿಂದ ಕೂಡಿದ ಮಾಂಸವನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ ಪ್ರಕರಣ ಈಚೆಗೆ ನಡೆದಿದೆ.
ಇಲ್ಲಿನ ಉಲುಗುಲಿ ತೋಟದ ಕಾರ್ಮಿಕ ರವಿ ಭಾನುವಾರ ಸಂಜೆ ಕೋಳಿ ಮಾಂಸವನ್ನು ಖರೀದಿಸಿದ್ದು, ಮನೆಗೆ ತೆರಳಿ ಬಿಚ್ಚಿ ನೋಡಿದಾಗ ಮಾಂಸದಲ್ಲಿ ಹುಳಗಳಿದ್ದ ದೃಶ್ಯ ಕಂಡುಬಂದಿದೆ. ಕೂಡಲೇ ರವಿ ಅವರು ಮಾರುಕಟ್ಟೆಗೆ ತೆರಳಿ ಮಾರಾಟಗಾರರಲ್ಲಿ ವಿಚಾರಿಸಲು ಹೋದಾಗ ಉಡಾಪೆಯಿಂದ ವರ್ತಿಸಿದ್ದಾರೆ.

ಈ ವೇಳೆ ಆಟೊ ಚಾಲಕರು, ಮತ್ತು ಸಾರ್ವಜನಿಕರು ಮಾರಾಟಗಾರನ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಅವರ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆ ತೆರಳಿದರು.
ಪಿಎಸ್‌ಐ ಜಯರಾಮ್ ಕೋಳಿ ಮಾಂಸ ಅಂಗಡಿಯ ಮಾಲೀಕರನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆಯನ್ನು ನೀಡಿ ಕಳುಹಿಸಿದಲ್ಲದೇ, ಆರೋಗ್ಯ ಮತ್ತು ಆಹಾರ ಇಲಾಖೆಯ ಅಧಿಕಾರಿಗಳನ್ನು ಕರೆದು ಎಲ್ಲ ಸ್ಥಳಗಳಿಗೆ ಭೇಟಿ ನೀಡಲು ಮಾಹಿತಿ ಕಳುಹಿಸುವುದಾಗಿ ತಿಳಿಸಿದ ನಂತರ ಸಾರ್ವಜನಿಕರು ಹಿಂದಿರುಗಿದರು.

ಗ್ರಾ.ಪಂ.ವಿರುದ್ಧ ಆಕ್ರೋಶ: ಮಾಂಸ ಮಾರಾಟದ ಅಂಗಡಿಗಳನ್ನು ಹರಾಜು ಮಾಡಿದ ನಂತರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಇರುವುದರಿಂದ ಈ ರೀತಿಯ ಕಳಪೆ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.