ADVERTISEMENT

ಖಾಲಿ ಹುದ್ದೆ ಭರ್ತಿ, ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:10 IST
Last Updated 7 ಫೆಬ್ರುವರಿ 2011, 10:10 IST

ಮಡಿಕೇರಿ: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದೂ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆಗಿರುವ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ಭಾನುವಾರ ಇಲ್ಲಿ ಭರವಸೆ ನೀಡಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ದ್ವಿತೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕೊಡಗು ಜಿಲ್ಲೆಯ ನಾಲ್ಕು ನ್ಯಾಯಾಲಯಗಳಲ್ಲಿ 167 ಮಂದಿ ನೌಕರರಿದ್ದಾರೆ. ಬೇರೆ ಇಲಾಖೆಗಳಿಗೆ ಹೋಲಿಸಿದರೆ ನ್ಯಾಯಾಂಗ ಇಲಾಖೆಯಲ್ಲಿ ನೌಕರರ ಸಂಖ್ಯೆ ಕಡಿಮೆಯಿರುವುದರಿಂದ ಹೆಚ್ಚಿನ ಒತ್ತಡದಿಂದ ಕೆಲಸ ನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಖಾಲಿ ಇರುವ ಸಿಬ್ಬಂದಿಗಳ ಬಗ್ಗೆ ಪಟ್ಟಿ ಸಲ್ಲಿಸಿದಲ್ಲಿ ಅವುಗಳ ಭರ್ತಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ’ ಎಂದು ಆಶ್ವಾಸನೆ ನೀಡಿದರು.

‘ಕೊಡಗಿನ ನ್ಯಾಯಾಲಯ ಕಟ್ಟಡಗಳಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮೂಲಕ ಪಟ್ಟಿ ಮಾಡಿ ಸಲ್ಲಿಸಿದಲ್ಲಿ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸುತ್ತೇನೆ’ ಎಂದು ನ್ಯಾಯಮೂರ್ತಿಗಳು ಭರವಸೆ ನೀಡಿದರು.

1984ರಲ್ಲಿಯೇ ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಸಂಘ ಅಸ್ತಿತ್ವಕ್ಕೆ ಬಂದರೂ 2007ರಲ್ಲಿ ಮೊದಲ ಸಮ್ಮೇಳನ ನಡೆದ ಬಗ್ಗೆ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ‘ತ್ರೈ ವಾರ್ಷಿಕದಂತೆ ಮೂರು ವರ್ಷಗಳೊಳಗಾಗಿಯೇ ಸಮ್ಮೇಳನ ನಡೆಸಲು ನೌಕರರು ಮುಂದಾಗಬೇಕು. ಇನ್ನು ಮುಂದೆ ಈ ರೀತಿ ಅನಗತ್ಯ ವಿಳಂಬ ಮಾಡಬಾರದು’ ಎಂದು ಸಲಹೆ ಮಾಡಿದರು.

ಹುದ್ದೆಗಳ ಭರ್ತಿಗೆ ಆಗ್ರಹ: ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷ ಬಿ.ಎಸ್. ಪ್ರಭಾಕರ ಪ್ರಸಾದ್ ಮಾತನಾಡಿ, ‘ನ್ಯಾಯಾಂಗ ಇಲಾಖೆಯಲ್ಲಿ ಖಾಲಿ ಇರುವಂತಹ 1600 ಹುದ್ದೆಗಳ ಭರ್ತಿಗೆ ಸರ್ಕಾರ ಒಪ್ಪಿಗೆ ಸೂಚಿಸಿ, ಜಿಲ್ಲಾವಾರು ಹುದ್ದೆಗಳನ್ನು ಹಂಚಿಕೆ ಮಾಡಿದೆ. ಆದರೆ, ಇನ್ನೂ ಭರ್ತಿಯಾಗಿಲ್ಲ. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಹುದ್ದೆಗಳನ್ನು ಭರ್ತಿ ಮಾಡಬೇಕಿರುವುದರಿಂದ ಸಾಕಷ್ಟು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದಷ್ಟು ಬೇಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ಕುಂಞಪ್ಪ ಮಾತನಾಡಿ, ಮುಖ್ಯಮಂತ್ರಿಗಳು ಫೆ. 24ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಜಿಲ್ಲೆಯ ಸರ್ಕಾರಿ ನೌಕರರಿಗೆ ಗಿರಿಭತ್ಯೆ ನೀಡುವ ಕುರಿತು ಪ್ರಸ್ತಾಪ ಮಾಡುವ ಸಂಭವವಿದೆ ಎಂದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಶೋಕ್ ಜಿ.ನಿಜಗಣ್ಣವರ್ ಮಾತನಾಡಿದರು.ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಸಂಘದ ಕಾರ್ಯದರ್ಶಿ ಬಿ.ಎಸ್.ಜಯಪ್ಪ ಸ್ವಾಗತಿಸಿದರು. ಖಜಾಂಚಿ ಸಿ.ಜಿ. ಪೆಮ್ಮಯ್ಯ ವರದಿ ವಾಚಿಸಿದರು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಸಿ.ಎಂ. ಮೇದಪ್ಪ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆಡಳಿತಾಧಿಕಾರಿ ಎಂ. ಚಿದಾನಂದ, ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷ ಬಿ.ಎಸ್. ಮೋಹನ ಮಾತನಾಡಿದರು. ಇದೇ ಸಂದರ್ಭದಲ್ಲಿ ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.