ADVERTISEMENT

`ಗಡಿ ಭಾಗದಲ್ಲಿ ಕಣ್ಗಾವಲು'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 9:26 IST
Last Updated 6 ಡಿಸೆಂಬರ್ 2012, 9:26 IST

ವಿರಾಜಪೇಟೆ: ಕೊಡಗು ಜಿಲ್ಲೆ ಹಾಗೂ ಅಂತರರಾಜ್ಯ ಗಡಿ ಭಾಗಗಳಲ್ಲಿ ಗುಪ್ತಚರ ದಳ ನಿಗಾ ವಹಿಸಿದೆ. ಸಾರ್ವಜನಿಕರು ಅಪರಾಧ ಕೃತ್ಯ, ಅನೈತಿಕ ಚಟುವಟಿಕೆಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೆ ಅಪರಾಧಿಗಳನ್ನು ಪತ್ತೆ ಸಾಧ್ಯವಾಗಲಿದೆ ಎಂದು ರಾಜ್ಯ ಭಯೋತ್ಪಾದಕ ನಿಗ್ರಹ ದಳದ ಐಜಿಪಿ ಭಾಸ್ಕರ್ ರಾವ್ ಹೇಳಿದರು.

ಪಟ್ಟಣದಲ್ಲಿ ಈಚೆಗೆ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೊಡಗಿನಲ್ಲಿ ನಕ್ಸಲ್ ಚಟುವಟಿಕೆ ಹಿಂದಿನಿಂದಲೂ ಇಲ್ಲ. ನಕ್ಸಲ್ ನಿಗ್ರಹ ದಳ ಚಿಕ್ಕಮಗಳೂರಿನ ದಟ್ಟಾರಣ್ಯದಲ್ಲಿ ಶೋಧ ಕೈಗೊಂಡಾದ ಅಲ್ಲಿನ ತಂಡವೊಂದು ಉತ್ತರ ಕೊಡಗಿಗೆ ನುಸುಳಿದೆ.

ಹೀಗೆ ನಕ್ಸಲರು ಬಂದಾಗ ನಾಗರಿಕರು ಪೊಲೀಸರಿಗೆ ಸುಳಿವು ನೀಡಬೇಕು. ನಕ್ಸಲರು ಯಾವಾಗಲೂ ಸಮಾಜಕ್ಕೆ ಕಂಟಕರು. ಹಲವು ಸಮಸ್ಯೆಗಳನ್ನು ಅವರೇ ಹುಟ್ಟು ಹಾಕುತ್ತಾರೆ ಎಂದು ಟೀಕಿಸಿದರು.

ಕೇರಳ ಗಡಿ ಭಾಗದಿಂದ ನಕ್ಸಲರು ರಾಜ್ಯಕ್ಕೆ ನುಸುಳಿಲ್ಲ. ಉಭಯ ರಾಜ್ಯಗಳ ಬಾಂಧವ್ಯ ಚೆನ್ನಾಗಿದೆ. ಕೇರಳದವರು ಕರ್ನಾಟಕಕ್ಕೂ, ಇಲ್ಲಿನವರು ಅಲ್ಲಿಗೂ ಹೋಗಿ ವ್ಯಾಪಾರ ಮಾಡುತ್ತಾರೆ. ಗಡಿಯಲ್ಲಿ ಅಪರಾಧ ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಜತೆಗೆ ಅರಣ್ಯ ಇಲಾಖೆಯ ರಕ್ಷಕರು ಭದ್ರತೆ ಒದಗಿಸುತ್ತಾರೆ ಎಂದರು. 

ಆಸ್ಸೋಂ ಹಾಗೂ ಬಾಂಗ್ಲಾದೇಶದಿಂದ ಕೊಡಗು ಜಿಲ್ಲೆಗೆ ಕಾರ್ಮಿಕರು ವಲಸೆ ಬರುತ್ತಿದ್ದಾರೆ. ಇವರ ಮೇಲೆ ನಿಗಾ ಇರಿಸಲು ಗುಪ್ತಚರ ದಳಕ್ಕೆ ಸೂಚಿಸಲಾಗಿದೆ. ಬೆಂಗಳೂರಿನ ಭಯೋತ್ಪಾದಕ ನಿಗ್ರಹ ದಳದವರು ಜಿಲ್ಲೆಯಾದ್ಯಂತ ಸಂಚರಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೊಡಗು ಜನರಿಗೆ ನಕ್ಸಲರ ಭೀತಿ ಬೇಡ ಎಂದು ಹೇಳಿದರು.  1996ರಲ್ಲಿ ಪೊಲೀಸ್ ಉನ್ನತಾಧಿಕಾರಿಯಾಗಿ ಕೊಡಗಿನಲ್ಲಿ ಸಲ್ಲಿಸಿದ ಸೇವೆಯನ್ನು ಅವರು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.