ADVERTISEMENT

ಗಣೇಶೋತ್ಸವ ಸಡಗರಕ್ಕೆ ನಗರ ಸಜ್ಜು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:37 IST
Last Updated 2 ಸೆಪ್ಟೆಂಬರ್ 2013, 6:37 IST
ಮಡಿಕೇರಿಯಲ್ಲಿ ಕಲಾವಿದರು ವಿವಿಧ ರೂಪದ ಗಣೇಶನ ಮೂರ್ತಿಗಳನ್ನು ತಯಾರಿಸುವಲ್ಲಿ ತಲ್ಲೆನರಾಗಿದ್ದಾರೆ.
ಮಡಿಕೇರಿಯಲ್ಲಿ ಕಲಾವಿದರು ವಿವಿಧ ರೂಪದ ಗಣೇಶನ ಮೂರ್ತಿಗಳನ್ನು ತಯಾರಿಸುವಲ್ಲಿ ತಲ್ಲೆನರಾಗಿದ್ದಾರೆ.   

ಮಡಿಕೇರಿ: ಸಂಕಷ್ಟಗಳನ್ನು ಪರಿಹರಿಸುವ ವಿಘ್ನ ವಿನಾಶಕ ಗಣೇಶೋತ್ಸವ ಹೊಸ್ತಿಲಲ್ಲಿ ಬಂದು ನಿಂತಿದೆ. ಈ ಸಂದರ್ಭದಲ್ಲಿ ವಿವಿಧ ರೂಪಗಳ ಗಣೇಶನ ಮೂರ್ತಿ ತಯಾರಿಕೆ ನಗರದಾದ್ಯಂತ ಭರದಿಂದ ಸಾಗಿದೆ.

ಸಂಪ್ರದಾಯದಂತೆ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜಿಸಿ ನಂತರ ನೀರಿನಲ್ಲಿ ಬಿಡಲಾಗುತ್ತದೆ. ಮನೆಗಳಲ್ಲಿ, ಸಾರ್ವಜನಿಕ ಬೀದಿಗಳಲ್ಲಿ, ಕೆಲವು ಕಚೇರಿಗಳಲ್ಲೂ ಗಣೇಶನ ಮೂರ್ತಿ ಇಟ್ಟು ಪೂಜಿಸಲಾಗುತ್ತದೆ. ಇದರ ಹಿನ್ನೆಲೆಯಲ್ಲಿ ವಿವಿಧ ರೂಪಗಳ ಗಣೇಶನ ಮೂರ್ತಿಗೆ ಎಲ್ಲೆಡೆ ಬೇಡಿಕೆ ಬಂದಿದೆ.

ಪುರಾಣ ಕತೆಗಳು, ಮಹಾಭಾರತ ಹಾಗೂ ರಾಮಾಯಣದಲ್ಲಿ ಬರುವ ಪ್ರಸಂಗಗಳನ್ನು ಆಧರಿಸಿ ಗಣೇಶನನ್ನು ವಿವಿಧ ರೂಪದಲ್ಲಿ ತಯಾರಿಸಲಾಗುತ್ತಿದೆ. ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಗಣೇಶನ ಮೂರ್ತಿಗಳಿಗೆ ಹೆಚ್ಚು ಬೇಡಿಕೆಯಿದೆ. ಇದರ ಜೊತೆಗೆ ಚಿತ್ತಾಕರ್ಷಕ ಬಣ್ಣಗಳಿಂದ ರಚಿಸಲಾದ ಮೂರ್ತಿಗಳನ್ನು ಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ.

ಸೆಪ್ಟೆಂಬರ್ 9ರಿಂದ ಗಣೇಶೋತ್ಸವ ಆರಂಭವಾಗಲಿದೆ. ಕೆಲವರು ಒಂದು ದಿನ ಮಾತ್ರ ಗಣೇಶ್ ಮೂರ್ತಿ ಇಟ್ಟುಕೊಂಡರೆ, ಇನ್ನು ಕೆಲವರು ಐದು ದಿನ ಅಥವಾ 11 ದಿನಗಳವರೆಗೆ ಇಟ್ಟುಕೊಂಡು ಪೂಜೆ ಸಲ್ಲಿಸುತ್ತಾರೆ. ನಂತರ ಕೆರೆಗೆ, ನದಿಗೆ ಬಿಡುತ್ತಾರೆ.

ಒಗ್ಗೂಡಲು ಹಬ್ಬ:
ಭಾರತ ದೇಶವನ್ನು ಬ್ರಿಟಿಷರು ಆಳುತ್ತಿದ್ದ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಬೇಕೆನ್ನುವ ಉದ್ದೇಶದಿಂದ ಮಹಾರಾಷ್ಟ್ರದ ಪುಣೆಯಲ್ಲಿ ಗಣೇಶೋತ್ಸವವನ್ನು ಆಚರಿಸಲು ಆರಂಭಿಸಲಾಯಿತೆಂದು ಹೇಳಲಾಗುತ್ತಿದೆ. ಹಬ್ಬದ ನೆಪದಲ್ಲಿ ಜನರನ್ನು ಒಗ್ಗೂಡಿಸುವುದು ಇದರ ಉದ್ದೇಶವಾಗಿತ್ತು.

ದಿನ ಕಳೆದಂತೆ ಈ ಹಬ್ಬವು ಈಗ ಬಹುತೇಕ ದೇಶದಾದ್ಯಂತ ವ್ಯಾಪಿಸಿದೆ. ಪ್ರತಿ ವರ್ಷ ಕೂಡ ಅದ್ಧೂರಿಯಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ನೈಸರ್ಗಿಕ ಬಣ್ಣಗಳ ಬಳಕೆಗೆ ಮನವಿ:
ಗಣೇಶ ಮೂರ್ತಿಯನ್ನು ತಯಾರಿಸಲು ರಾಸಾಯನಿಕ ಪದಾರ್ಥಗಳನ್ನು ಬಳಸಬಾರದು. ಈ ಪದಾರ್ಥಗಳಲ್ಲಿ ಸೀಸ ಸೇರಿದಂತೆ ಇತರೆ ವಿಷಕಾರಿ ಅಂಶವಿರುವುದರಿಂದ ಇವು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೈಸರ್ಗಿಕ ಬಣ್ಣಗಳಿಂದ ಗಣೇಶ ಮೂರ್ತಿಯನ್ನು ತಯಾರಿಸಬೇಕೆಂದು ಪ್ರಜ್ಞಾವಂತ ನಾಗರಿಕರು ಮನವಿ ಮಾಡಿಕೊಳ್ಳುತ್ತಾರೆ.

ಇದಲ್ಲದೇ, ಗಣೇಶನ ಮೂರ್ತಿಯನ್ನು ವಿಸರ್ಜನೆಗೈದ ಕೆರೆ, ಬಾವಿ, ಕೊಳಗಳು ಕೂಡ ರಾಸಾಯನಿಕ ಅಂಶಗಳಿಂದ ಮಲೀನಗೊಳ್ಳುತ್ತವೆ. ಇದನ್ನು ತಪ್ಪಿಸಲು ನೈಸರ್ಗಿಕ ಬಣ್ಣವೇ ಸೂಕ್ತ ಎಂದು ಸಾರ್ವಜನಿಕರ ವಲಯದಿಂದ ಅಭಿಪ್ರಾಯ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.