ADVERTISEMENT

ಗರಿಗೆದರಿದ ನಿರೀಕ್ಷೆ: ಹುಸಿಯಾಗದಿರಲಿ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 8:35 IST
Last Updated 21 ಮಾರ್ಚ್ 2011, 8:35 IST

ಮಡಿಕೇರಿ: ನವೆಂಬರ್ 15ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲೆಗೆ ಆಗಮಿಸಿ ಸ್ತ್ರೀಶಕ್ತಿ ಫಲಾನುಭವಿ ತಾಯಂದಿರಿಗೆ ಸೀರೆ ವಿತರಿಸಿ ಹೋದ ನಂತರ ಮತ್ತೆ ಈ ತಿಂಗಳ 26ರಂದು ಕೊಡಗಿಗೆ ಆಗಮಿಸುವ ಪ್ರವಾಸ ಕಾರ್ಯಕ್ರಮ ನಿಗದಿಯಾಗಿದೆ. ಭಿನ್ನಮತೀಯ ಚಟುವಟಿಕೆಗಳ ನಡುವೆಯೂ ಸದ್ಯಕ್ಕೆ ಮುಖ್ಯಮಂತ್ರಿಗಳ ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುತ್ತಿದ್ದೆ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ.

ಮುಖ್ಯಮಂತ್ರಿಗಳ ಭೇಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮತ್ತೆ ಜನತೆಯ ನಿರೀಕ್ಷೆಗಳು ಗರಿಗೆದರಿವೆ. ಬಾಣೆ ಸಮಸ್ಯೆಗೆ ಪರಿಹಾರ, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಹಿಡಿದು ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲೆ ಅನುದಾನದ ನಿರೀಕ್ಷೆಯನ್ನೂ ಎದುರು ನೋಡುತ್ತಿದೆ.ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೂ ಮುನ್ನ ಅಂದರೆ, ನ. 15ರಂದು ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ನೆರವಿನ ಮಹಾಪೂರವನ್ನೇ ಹರಿಸಿದ್ದರು. ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ಸ್ಥಾಪನೆಗೆ ಒಂದು ಕೋಟಿ, ವೀರಸೇನಾನಿ ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣಕ್ಕೆ ಒಂದು ಕೋಟಿ, ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನುದಾನ (ನಿರ್ದಿಷ್ಟವಾಗಿ ಇಂತಿಷ್ಟು ಅನುದಾನ ಘೋಷಿಸಲಿಲ್ಲ), ತಲಕಾವೇರಿ- ಭಾಗಮಂಡಲದಲ್ಲಿ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಐದು ಕೋಟಿ ಬಿಡುಗಡೆ, ಪ್ರಸ್ತುತ ಮಡಿಕೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ನೀಡುತ್ತಿರುವ ಗಿರಿಭತ್ಯೆಯನ್ನು ಜಿಲ್ಲೆಯ ಎಲ್ಲಾ ನೌಕರರಿಗೆ ವಿಸ್ತರಿಸಲು ಪ್ರಯತ್ನ, ಗಾಂಧಿ ಸ್ಮಾರಕ ಭವನ ನಿರ್ಮಾಣಕ್ಕೆ ತಕ್ಷಣ ಹಣ ಬಿಡುಗಡೆ ಮಾಡುವುದೂ ಸೇರಿದಂತೆ  ಹಲವು ಯೋಜನೆಗಳಿಗೆ ನೆರವು ನೀಡುವುದಾಗಿ  ಯಡಿಯೂರಪ್ಪ ಘೋಷಿಸಿದ್ದರು.

ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡುವ ಸಂಬಂಧ ಹಣಕಾಸು ಇಲಾಖೆಗೆ ಬರೆದ ಪತ್ರ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿರಬಹುದು. ಆದರೆ, ಮೇಲಿನ ಯೋಜನೆಗಳಿಗೆ ಇನ್ನೂ ಹಣ ಬಿಡುಗಡೆಯಾಗಬೇಕಿದೆ. ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಕೊಡಗು ಪ್ಯಾಕೇಜ್ ಯೋಜನೆಯಡಿ 10 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ನೀಡಿದ್ದ ಭರವಸೆ ಮಾತ್ರ ಈಡೇರಿದಂತಿದೆ. ಇತ್ತೀಚೆಗಷ್ಟೇ ರೂ.10 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ, ಈ ಅನುದಾನ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎನ್ನುವಂತಾಗಿದೆ.

ಕೊಡಗು ಜಿಲ್ಲೆಯಲ್ಲಿ ಆರು ತಿಂಗಳು ನಿರಂತರ ಮಳೆ. ಹೀಗಾಗಿ, ಲೋಕೋಪಯೋಗಿ ರಸ್ತೆಗಳೂ ಸೇರಿದಂತೆ ಜಿ.ಪಂ. ಆಂತರಿಕ ರಸ್ತೆಗಳು ಪ್ರತಿ ವರ್ಷ ಹದಗೆಡುವುದು ಸಾಮಾನ್ಯ. ಪ್ರಸ್ತುತ ಮಡಿಕೇರಿ- ಸಂಪಾಜೆ ನಡುವೆ ನಡೆಯುತ್ತಿರುವ ಹೆದ್ದಾರಿ ಅಭಿವೃದ್ಧಿ ಕೆಲಸ ಹೊರತುಪಡಿಸಿದರೆ ಜಿಲ್ಲೆಯ ಇತರೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಟೆಂಡರ್ ಪ್ರಕ್ರಿಯೆ ಮುಗಿದು ಸಮರೋಪಾದಿಯಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎನ್ನುತ್ತಿದ್ದಾರೆ ಬಿಜೆಪಿ ಮುಖಂಡರು.
ಆದರೆ, ರಾಜ್ಯ ಸರ್ಕಾರ ಕೊಡಗು ಪ್ಯಾಕೇಜ್ ಯೋಜನೆ ಸೇರಿದಂತೆ ರಸ್ತೆ ಅಭಿವೃದ್ಧಿಗೆ ಘೋಷಿಸಿದ ಅನುದಾನ ಆಗಾಗ್ಗೆ ಕೊಂಚ ಕೊಂಚ ಬಿಡುಗಡೆಯಾಗಿದ್ದರಿಂದ ಮಾರ್ಚ್ ಅಂತ್ಯಗೊಳ್ಳುತ್ತಾ ಬಂದರೂ ಜಿಲ್ಲೆಯ ರಸ್ತೆಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಸರ್ಕಾರ ನೀಡಿದ ಭರವಸೆ ಸಕಾಲದಲ್ಲಿ ಕಾರ್ಯರೂಪಕ್ಕೆ ರೂಪಕ್ಕೆ ಬರುವುದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರತೊಡಗಿದೆ.

ಈ ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ. ಕುಮಾರಸ್ವಾಮಿ ಕುಶಾಲನಗರದಲ್ಲಿ ಕೋಟಿ ಕೋಟಿ ರೂಪಾಯಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಹೋದರು. ಆದರೆ, ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಎಷ್ಟು ಅನುದಾನ ಜಿಲ್ಲೆಗೆ ಬಿಡುಗಡೆಯಾಯಿತೋ ಅಥವಾ ಎಷ್ಟು ಯೋಜನೆಗಳು ಅನುಷ್ಠಾನಕ್ಕೆ ಬಂದವೋ ಗೊತ್ತಿಲ್ಲ. ಒಟ್ಟಿನಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದಾಗಲೆಲ್ಲಾ ಇಂತಹ ನಿರೀಕ್ಷೆಗಳು ಜಿಲ್ಲೆಯ ಜನತೆಯಲ್ಲಿ ಗರಿಗೆದರುವುದು ಸಹಜ. ಆದರೆ, ಮಾಡಿದ ಘೋಷಣೆಗಳು ನಿಜವಾಗಿಯೂ ಅನುಷ್ಠಾನಕ್ಕೆ ಬಂದಾಗ ಮಾತ್ರ ಜನರ ವಿಶ್ವಾಸ ಗೆಲ್ಲಲು ಸರ್ಕಾರಕ್ಕೆ ಸಾಧ್ಯವಾಗಬಹುದು.
ಇನ್ನು, ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಪಡಿಸುವ ವೇಳೆಗೆ ಕೇಸರಿ ಪಕ್ಷದಲ್ಲಿ ಮತ್ತೆ ಭಿನ್ನಮತೀಯ ಚಟುವಟಿಕೆಗಳು ಆರಂಭವಾಗಿವೆ.

ನ. 15ರಂದು ಕೊಡಗಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಜಿಲ್ಲೆಯ ಜನರ ಬೇಡಿಕೆಯನ್ನು ನಿರಾಸೆಗೊಳಿಸುವುದಿಲ್ಲ ಎಂಬ ಭರವಸೆ ನೀಡಿ ಹೋಗಿದ್ದರು. ಆನಂತರ, ಅನೇಕ ರಾಜಕೀಯ ಬೆಳವಣಿಗೆಗಳು ನಡೆದು ಹೋದವು. ಇದೀಗ, ಸಚಿವ ಸಂಪುಟದಲ್ಲಿ ಅನೇಕ ಸ್ಥಾನಗಳು ಕೂಡ ಖಾಲಿ ಬಿದ್ದಿವೆ. ಹಿರಿತನ ಹಾಗೂ ಜಿಲ್ಲಾ ಪ್ರಾತಿನಿಧ್ಯದ ಆಧಾರದಲ್ಲಿ ರಂಜನ್ ಅವರಿಗೆ ಸಚಿವ ಸ್ಥಾನ ಸಿಗುವ ಆಸೆ ಮತ್ತೆ ಚಿಗುರೊಡೆದಿದೆ. ಭಿನ್ನಮತೀಯ ಚಟುವಟಿಕೆಗಳು ನಿಂತು ಯಾವುದೇ ರಾಜಕೀಯ ಬದಲಾವಣೆಗಳಾಗದಿದ್ದರೆ ಈಗಲಾದರೂ ಕೊಡಗಿಗೆ ಸಚಿವ ಸ್ಥಾನ ದಕ್ಕುತ್ತೇನೋ ಕಾದು ನೋಡಬೇಕಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.