ADVERTISEMENT

ಗಾಂಧಿ ಜಯಂತಿ: ಸತ್ಯ ಮಾರ್ಗ ಅನುಸರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 7:40 IST
Last Updated 3 ಅಕ್ಟೋಬರ್ 2012, 7:40 IST

ಮಡಿಕೇರಿ: ನಗರದ ಕೋಟೆ ವಿಧಾನ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ, ಸಾರ್ವಜನಿಕ ಶಿಕ್ಷಣ ಹಾಗೂ ವಾರ್ತಾ ಇಲಾಖೆ ವತಿಯಿಂದ ಮಹಾತ್ಮ ಗಾಂಧೀಜಿಯವರ 144ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ ಅಂಗವಾಗಿ ವಾರ್ತಾ ಇಲಾಖೆ ವತಿಯಿಂದ ಹೊರತಂದಿರುವ `ಜನಪದ~ ಹಾಗೂ `ಮಾರ್ಚ್ ಆಫ್ ಕರ್ನಾಟಕ~ ವಿಶೇಷ ಸಂಚಿಕೆಯನ್ನು ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಬಿಡುಗಡೆ ಮಾಡಿದರು. 

ಭಾರತೀಯ ಸೇವಾದಳದ ಜಿಲ್ಲಾ ಘಟಕ, ಸರ್ವೋದಯ ಸಮಿತಿ, ಸಂತ ಮೈಕಲರ, ಸಂತ ಜೋಸಫರ ಶಾಲೆ, ಸ್ಕೌಟ್ ಮತ್ತು ಗೈಡ್ಸ್ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿಯವರ ಕುರಿತು ಪ್ರಾರ್ಥನೆ ಮಾಡಿದರು. 

ವಕೀಲ ಎಂ.ಎ.ನಿರಂಜನ್ ಅವರು ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆದರ್ಶ, ಅಹಿಂಸಾ ಮಾರ್ಗ ಮತ್ತು ದೂರದೃಷ್ಟಿಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ, ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಅಂಜನಪ್ಪ, ಮುಖ್ಯಯೋಜನಾಧಿಕಾರಿ ಶ್ರಿನಿವಾಸರಾವ್, ಮತ್ತಿತರರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಸ್ಕೌಟ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯೋಥ್ಯು, ಸರ್ವೋದಯ ಸಮಿತಿ ಜಿಲ್ಲಾ ಸದಸ್ಯ ಕೋಡಿ ಚಂದ್ರಶೇಖರ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶಿವಕುಮಾರ್, ಮತ್ತಿತರರು ಹಾಜರಿದ್ದರು.  ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಇಂದಿರಮ್ಮ ಸ್ವಾಗತಿಸಿದರು, ಮಣಜೂರು ಮಂಜುನಾಥ್ ನಿರೂಪಿಸಿದರು, ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ವಂದಿಸಿದರು.

ವಿವಿಧೆಡೆ ಶ್ರಮದಾನ
ನಾಪೋಕ್ಲು: ಗಾಂಧಿಜಯಂತಿ ಪ್ರಯುಕ್ತ ನಾಪೋಕ್ಲು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಶ್ರಮದಾನ ನಡೆಯಿತು. ಸಮೀಪದ ಬಲ್ಲಮಾವಟಿ ವಲಯ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಮಂಗಳವಾರ ಧ್ವಜಾರೋಹಣ ನೆರವೇರಿಸಲಾಯಿತು. ಪಕ್ಷದ ಹಿರಿಯ    ಮುಖಂಡ ಕಾಳೇರ ಕಾದರ್ ಹಾಜಿ ಧ್ವಜಾರೋಹಣ ನೆರವೇರಿಸಿದರು.

ತಾಲೂಕು ಪಂಚಾಯತಿ ಸದಸ್ಯ ನೆರವಂಡ ಉಮೇಶ್ ಮಾತನಾಡಿದರು. ನಾಪೋಕ್ಲು- ಬಲ್ಲಮಾವಟಿ ಮುಖ್ಯರಸ್ತೆಯ ನೆಲಜಿ ಗ್ರಾಮದಲ್ಲಿ ರಸ್ತೆಯ ಎರಡೂ ಬದಿ ಬೆಳೆದಿದ್ದ ಗಿಡಗಂಟಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಕಡಿದು ಸ್ವಚ್ಛಗೊಳಿಸಿದರು. ನೆಲಜಿ ಗ್ರಾಮದ ಕೋಟೆರ ಚೆಂಗಪ್ಪ ನೇತೃತ್ವ ವಹಿಸಿದ್ದರು.

ಬಲ್ಲಮಾವಟಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿವರ್ಗ ಬಲ್ಲಮಾವಟಿ ಗ್ರಾಮದಲ್ಲಿ ಶ್ರಮದಾನ ನಡೆಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಕೋಡಿಯಂಡ ಇಂದಿರಾ ಹರೀಶ್, ಸದಸ್ಯ ಕರವಂಡ ಲವ ನಾಣಯ್ಯ ಪಾಲ್ಗೊಂಡಿದ್ದರು. ನಾಪೋಕ್ಲು ವ್ಯಾಪ್ತಿಯ ವಿವಿಧ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶ್ರಮದಾನ ನಡೆಸಿದರು.

ಗಾಂಧಿ, ಶಾಸ್ತ್ರಿ ಸ್ಮರಣೆ
ಶನಿವಾರಸಂತೆ: ಪಟ್ಟಣದ ತ್ಯಾಗರಾಜ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಗಾಂಧಿ ಜಯಂತಿ ಸಮಾರಂಭವನ್ನು ಶಿಕ್ಷಕ ಮೋಹನ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ತಂಗಮ್ಮ ಮಾತನಾಡಿ, ಯುವಜನಾಂಗಕ್ಕೆ ಗಾಂಧೀಜಿಯವರೇ ಆದರ್ಶ. ಸತ್ಯ, ಅಹಿಂಸೆ, ಶಾಂತಿ ಪಾಲನೆಯ ಮೂಲಕ ಗಾಂಧೀಜಿಯವರನ್ನು ಸದಾ ಸ್ಮರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಸ್‌ಡಿಎಂಸಿ ಸದಸ್ಯರಾದ ರಾಗಿಣಿ ಮತ್ತು ಮೀನಾಕ್ಷಿ, ಶಿಕ್ಷಕಿಯರಾದ ವನಜಾಕ್ಷಿ, ಪ್ರಿಯದರ್ಶಿನಿ ಮಂಜುಳಾ, ಮಾಲತಿ, ಎಸ್.ಜಿ.ನರೇಶ್ಚಂದ್ರ ಇದ್ದರು.

ಮದ್ಯ ವ್ಯಸನ ಮುಕ್ತರ ಸಮಾವೇಶ
ಸೋಮವಾರಪೇಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಮದ್ಯ ವ್ಯಸನ ಮುಕ್ತರ ಸಮಾವೇಶವು ಮಂಗಳವಾರ ಇಲ್ಲಿಯ ಒಕ್ಕಲಿಗರ ಸಮಾಜದ ಸಭಾಂಗಣದಲ್ಲಿ ನಡೆಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ.ಲೋಕೇಶ್ ಸಮಾವೇಶವನ್ನು ಉದ್ಘಾಟಿಸಿದರು.  ಅತಿಥಿಗಳಾಗಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ, ಲೇಖಕರಾದ ಕಣಿವೆ ಭಾರದ್ವಾಜ, ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಆರ್.ಪ್ರಮೋದ್, ಯೋಜನಾಧಿಕಾರಿ ಕೆ.ಚಿದಾನಂದ ಇದ್ದರು.

ಕಾರ್ಯಕ್ರಮದಲ್ಲಿ ನವಜೀವನ ಸಮಿತಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆ ನಗರದ ಗಾಂಧಿ ವೃತ್ತದಿಂದ ಮಹಿಳೆಯರು ಹಾಗೂ ನವಜೀವನ ಸಮಿತಿ ಸದಸ್ಯರಿಂದ ಬೃಹತ್ ಮೆರವಣಿಗೆ ನಡೆಯಿತು.

ಶಾಲಾ ಆವರಣದಲ್ಲಿ ಶ್ರಮದಾನ
ಕುಶಾಲನಗರ: ಗಾಂಧಿಜಯಂತಿ ಅಂಗವಾಗಿ ಇಲ್ಲಿಗೆ ಸಮೀಪದ ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಆವರಣದೊಳಗೆ ಶ್ರಮದಾನ ಮಾಡಿದರು.

ಶಾಲಾ ಮುಖ್ಯಶಿಕ್ಷಕಿ ಟಿ.ಕೆ.ತಂಗಮ್ಮ ಅವರ ನೇತೃತ್ವದಲ್ಲಿ ಶಾಲೆಯ ಬೋಧಕ ವೃಂದದವರೂ ಶ್ರಮದಾನದಲ್ಲಿ ಭಾಗಿಯಾದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುಮ, ಸದಸ್ಯ ವೆಂಕಟೇಶ್, ಮುಖ್ಯಶಿಕ್ಷಕಿ ತಂಗಮ್ಮ ಇದ್ದರು. ಶಿಕ್ಷಕರಾದ ಗಣೇಶ್ ಸ್ವಾಗತಿಸಿದರು, ಸಹಶಿಕ್ಷಕಿ ಭಾರತಿ ದಿನದ ಮಹತ್ವದ ಕುರಿತು ಮಾತನಾಡಿದರು, ರೇಣುಕಾ ನಿರೂಪಿಸಿದರು, ಭೋಜಮ್ಮ ವಂದಿಸಿದರು.

ಕೂಡ್ಲೂರು: ಇಲ್ಲಿಗೆ ಸಮೀಪದ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗಾಂಧಿಜಯಂತಿ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಂದ ಶ್ರಮದಾನ ನಡೆಯಿತು.

ಶಾಲೆಯ ಮುಖ್ಯಶಿಕ್ಷಕ ಎಚ್.ವೈ.ಶ್ರೀನಿವಾಸ್, ಗ್ರಾಮದ ಹಿರಿಯ ನಾಗರೀಕ ಅಯ್ಯಣ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎ.ಗಣೇಶ್, ಶಿಕ್ಷಕ ಕೃಷ್ಣನಾಯಕ್, ರಮೇಶ್, ಗೋಪಾಲಕೃಷ್ಣ ಇದ್ದರು.

ಕೂಡಿಗೆ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿಜಯಂತಿ ಆಚರಿಸಲಾಯಿತು. ಶಾಲೆಯ ಮುಖ್ಯೋಪಧ್ಯಾಯ ಗಿರೀಶ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ತಾಲ್ಲೂಕು ಸಹಕಾರ ಕೂಟದ ನಿರ್ದೇಶಕ ಕೆ.ಕೆ.ನಾಗರಾಜಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಕರಾದ ವಾಣಿ, ಮೋಹನ್‌ಕುಮಾರಿ, ಗಂಗಮ್ಮ ಇದ್ದರು. ಗಾಂಧಿ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳು ಶಾಲಾ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ವಿವೇಕಾನಂದ ಪಿಯು ಕಾಲೇಜ್: ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಮಹಾತ್ಮಗಾಂಧಿ ಸ್ಮಾರಕ ಪದವಿ ಕಾಲೇಜಿನ ಪ್ರಾಂಶುಪಾಲ ಟಿ.ವಿ.ಪಂಡರಿನಾಥನಾಯ್ಡು ಮಾತನಾಡಿದರು.

ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಸತ್ಯ, ಧರ್ಮ, ತ್ಯಾಗ, ಪ್ರೀತಿ ಹಾಗೂ ಶಾಂತಿಯ ಮೂಲಕ ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ಮುಂದಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಮೂರ್ತಿ ಪಾಲ್ಗೊಂಡು ಮಹಾತ್ಮಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾಲೇಜಿನ ಉಪಪ್ರಾಂಶುಪಾಲೆ ಕ್ಲಾರಾ ರೇಷ್ಮ, ಉಪನ್ಯಾಸಕಿ ಶ್ಯಾಮಲ ನಾಗೇಂದ್ರ, ಪ್ರಶಾಂತಿ ಮೊದಲಾದವರಿದ್ದರು.ವಿದ್ಯಾರ್ಥಿಗಳಿಂದ ಗಾಂಧೀಜಿ ಕುರಿತಾದ ಭಾಷಣ, ಹಾಡು ಮೂಡಿಬಂದವು. ವಿದ್ಯಾರ್ಥಿ ಚಿಣ್ಣಪ್ಪ ನಿರೂಪಿಸಿ, ವಿದ್ಯಾ ಸ್ವಾಗತಿಸಿದರು.

`ಗಾಂಧೀಜಿ ತತ್ವ ಸ್ಮರಿಸಿ~
ವಿರಾಜಪೇಟೆ: ಮಹಾತ್ಮ ಗಾಂಧೀಜಿಯವರ ಆದರ್ಶ ತತ್ವಗಳು, ಸಿದ್ಧಾಂತಗಳನ್ನು ಯುವ ಪೀಳಿಗೆ ಅನುಸರಿಸಲಿ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿ.ಕೆ.ಸತೀಶ್‌ಕುಮಾರ್ ಹೇಳಿದರು. ಪಟ್ಟಣ ಪಂಚಾಯಿತಿ ವತಿಯಿಂದ ಮಂಗಳವಾರ ನಡೆದ ಗಾಂಧಿ ಜಯಂತಿಯಲ್ಲಿ ಅವರು ಮಾತನಾಡಿದರು.

ಪಂಚಾಯಿತಿ ಸಮಿತಿ ಅಧ್ಯಕ್ಷ ಎಂ.ಬಿ.ಕಟ್ಟಿಪೂಣಚ್ಚ, ಉಪಾಧ್ಯಕ್ಷೆ ಕೌಶರ್, ಸದಸ್ಯರಾದ ಬಿ.ಎಂ.ಕುಮಾರ್, ಬಿ.ಕೆ.ಚಂದ್ರು ಬಿ.ಪಿ.ಸೋಮಣ್ಣ, ಮರಿಯಾ ಸಿಕ್ವೇರಾ ಹಾಗೂ ಮುಖ್ಯಾಧಿಕಾರಿ ಎಚ್.ಆರ್ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.