ADVERTISEMENT

ಗುತ್ತಿಗೆದಾರನಿಂದ ದೂರು

ಕಾಮಗಾರಿ ಕಳಪೆ: ಯುವಕರ ತಕರಾರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 5:10 IST
Last Updated 8 ಏಪ್ರಿಲ್ 2013, 5:10 IST

ಮಡಿಕೇರಿ: ಬಿಳಿಗೇರಿ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆಯ ಕಳಪೆ ಕಾಮಗಾರಿಯನ್ನು ವಿರೋಧಿಸಿದ್ದಕ್ಕಾಗಿ ಯುವಕರ ಮೇಲೆ ಗುತ್ತಿಗೆದಾರರೊಬ್ಬರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಬಿಳಿಗೇರಿ ಗ್ರಾಮಸ್ಥರು ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಕೀಲ ಹಾಗೂ ಗ್ರಾಮಸ್ಥ ಬಿ.ಎ. ಮಾಚಯ್ಯ, ಮಡಿಕೇರಿ- ಬಿಳಿಗೇರಿ- ಕುಂಬಳದಾಳು ರಸ್ತೆಯ 4 ಕಿ.ಮೀ.ಯ ಮರು ಡಾಂಬರೀಕರಣಕ್ಕೆ ಲೋಕೋಪಯೋಗಿ ಇಲಾಖೆ ವತಿಯಿಂದ  69,66,877 ರೂಪಾಯಿ ಟೆಂಡರ್ ನೀಡಲಾಗಿದೆ ಎಂದರು.

ಆದರೆ ರಸ್ತೆ ಕಾಮಗಾರಿ ಮಾತ್ರ ಕಳಪೆ ಮಟ್ಟದಿಂದ ಕೂಡಿದ್ದು, ಇದನ್ನು ವಿರೋಧಿಸಿದ ಗ್ರಾಮದ ಯುವಕರ ಮೇಲೆ ಗುತ್ತಿಗೆ ದಾರರು ಇಲ್ಲಸಲ್ಲದ ಸುಳ್ಳು ದೂರು ದಾಖಲಿದ್ದಾರೆ. ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆಯನ್ನು ಪೊಲೀಸರು ಅರಿತು ಪ್ರಕರಣವನ್ನು ರದ್ದುಮಾಡುವಂತೆ ಅವರು ಒತ್ತಾಯಿಸಿದರು.

ADVERTISEMENT

ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಅವರೇ ಸ್ಥಳಕ್ಕೆ ಆಗಮಿಸಿ, ಕಳಪೆ ಕಾಮಗಾರಿಯಾಗಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದಾರೆ. ಆದರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದನ್ನು ಖಂಡಿಸಿದ ಅವರು, ದೂರು ರದ್ದು ಮಾಡದಿದ್ದಲ್ಲಿ ಪೊಲೀಸರ ವಿರುದ್ಧವೇ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಮದ ಮಂಞಿರ ಕುಟ್ಟಪ್ಪ ಮಾತನಾಡಿ, ರಸ್ತೆ ಕಾಮಗಾರಿಯ ಯಾವುದೇ ನಿಯಮಗಳನ್ನು ಪಾಲಿಸದೇ ನಡೆಸುತ್ತಿದ್ದ ಕಾಮಗಾರಿಯನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಗುತ್ತಿಗೆದಾರರು ದೂರು ದಾಖಲಿಸಿದ್ದಾರೆ ಎಂದು ತಿಳಿಸಿದರು.

ವಕೀಲರಾದ ರೀಮಾ, ಗ್ರಾಮಸ್ಥರಾದ ನಂದಾ ಉತ್ತಪ್ಪ, ಕಿರಣ್, ರವಿ ಮಾಚಯ್ಯ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.