ADVERTISEMENT

`ಗೊಡ್ಡು ಸಂಪ್ರದಾಯಗಳೇ ಸಂಸ್ಕೃತಿಯಾಗದಿರಲಿ'

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:37 IST
Last Updated 3 ಸೆಪ್ಟೆಂಬರ್ 2013, 6:37 IST

ಕುಶಾಲನಗರ: ಸಮಾಜದಲ್ಲಿ ತಲಾ ತಲಾಂತರಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ ಎಂಬ ಕಾರಣಕ್ಕೆ ಗೊಡ್ಡು ಸಂಪ್ರದಾಯಗಳು ಜನತೆಯ ಸಂಸ್ಕೃತಿಯಾಗಬಾರದು ಎಂದು ಕನ್ನಡ ಜಾನಪದ ಲೇಖಕ ಚಂದ್ರು ಕಾಳೇನಹಳ್ಳಿ ಅವರು ಅಭಿಪ್ರಾಯ ಪಟ್ಟರು.

ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 2013-14ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಂದ್ರ ಕಾಳೇನಹಳ್ಳಿ ಮಾತನಾಡಿದರು.

ವಿದ್ಯಾರ್ಥಿಗಳು ಯಾವುದೋ ಸ್ವಾಮಿ ಹೇಳಿದ್ದಾನೆ ಎಂಬ ಕಾರಣದಿಂದ ತನ್ನ ಭವಿಷ್ಯ ಬದಲಾಗುವುದೆಂದು ತಿಳಿದುಕೊಳ್ಳಬಾರದು. ಬದಲಾಗಿ ತನ್ನ ಭವಿಷ್ಯವನ್ನು ತಾನೇ ಬದಲಾಯಿಸಿಕೊಳ್ಳಬೇಕು. ಸುಸಂಸ್ಕೃತರಾಗುವುದೆಂದರೆ ಕೇವಲ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವುದಷ್ಟೇ ಅಲ್ಲ, ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ವ್ಯಸನಗಳಿಗೆ ಒಳಗಾಗಿರುವವರ ಬದುಕು ಹಾಳಾಗಿ ಹೋಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅವುಗಳಿಂದ ದೂರ ಉಳಿದು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಿ ಉನ್ನತ ಸ್ಥಾನಕ್ಕೇರಬೇಕು ಎಂದರು.

ಕಾಲೇಜು ಪ್ರಾಂಶುಪಾಲ ಎಚ್.ಕೆ. ಕೇಶವಯ್ಯ ಮಾತನಾಡಿದರು, ಅರ್ಥಶಾಸ್ತ್ರ ಉಪನ್ಯಾಸಕ ಡಾ. ಡಿ. ದೇವರಾಜ್ ಅವರು ಪ್ರಾಸ್ತಾವಿಕ ಮಾತನಾಡಿದರು. 2013-14ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾಗಿರುವ ಪಧಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಚೇತನ್ ಸ್ವಾಗತಿಸಿದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಪಿ. ಸತ್ಯನಾರಾಯಣ, ಕನ್ನಡ ಪ್ರಾಧ್ಯಾಪಕ ಪಿ.ಎಂ. ಸುಬ್ರಹ್ಮಣ್ಯ, ದೈಹಿಕ ಶಿಕ್ಷಣ ಉಪನ್ಯಾಸಕಿ ಐ.ಕೆ. ಪೂವಮ್ಮ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಂ.ಬಿ. ಜಯಂತ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಬಿ. ಭಾರತೀಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.