ADVERTISEMENT

ಗೋಣಿಕೊಪ್ಪಲು: ಮುಗಿಯದ ಸಮಸ್ಯೆ, ಜನರ ಗೋಳು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 8:55 IST
Last Updated 14 ಮಾರ್ಚ್ 2012, 8:55 IST
ಗೋಣಿಕೊಪ್ಪಲು: ಮುಗಿಯದ ಸಮಸ್ಯೆ, ಜನರ ಗೋಳು
ಗೋಣಿಕೊಪ್ಪಲು: ಮುಗಿಯದ ಸಮಸ್ಯೆ, ಜನರ ಗೋಳು   

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಪಟ್ಟಣ ಗೋಣಿಕೊಪ್ಪಲಿನಲ್ಲಿ ಬಸ್ ನಿಲ್ದಾಣ್ದ್ದದೇ ದೊಡ್ಡ ಸಮಸ್ಯೆ. ಅತಿಯಾದ ವಾಹನ ಸಂಚಾರ, ಕಿರಿದಾದ ಬಸ್ ನಿಲ್ದಾಣದಿಂದ ಜನತೆ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. 

ಪಟ್ಟಣದಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ದುಪ್ಪಟ್ಟಾಗಿದ್ದರೂ ಬಸ್ ನಿಲ್ದಾಣ ಮಾತ್ರ ಪುರಾತನ ಕಾಲ್ದ್ದದ್ದು. ಇಲ್ಲಿಯ ಬಸ್ ನಿಲ್ದಾಣದಲ್ಲಿ ಎರಡು ವರ್ಷಗಳ ಹಿಂದೆ ಖಾಸಗಿ ಬಸ್‌ಗಳು ಮಾತ್ರ ನಿಲ್ಲುತ್ತಿದ್ದವು. ಆದರೆ ಇತ್ತೀಚೆಗೆ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಬಸ್ ನಿಲ್ದಾಣ ಹಾಗೂ ರಸ್ತೆ ಮಾತ್ರ ಬದಲಾಗಿಲ್ಲ. ಇರುವ ಒಂದೇ ರಸ್ತೆಯಲ್ಲಿ ವಾಹನ ನಿಲುಗಡೆ, ಓಡಾಟ ಪಾದಚಾರಿಗಳ ಸಂಚಾರ, ವ್ಯಾಪಾರ ವಹಿವಾಟು ಎಲ್ಲವೂ ನಡೆಯ ಬೇಕಾಗಿದೆ.

ಪಟ್ಟಣದ ವಾಹನ ದಟ್ಟಣೆ ಕಡಿಮೆ ಮಾಡಲು ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಆದರೆ ಈ ರಸ್ತೆ  10 ವರ್ಷ ಕಳೆದರೂ ಇನ್ನೂ ಡಾಂಬರ್ ಕಂಡಿಲ್ಲ. ಇದೀಗ ರಸ್ತೆಗೆ ಬೇಕಾಗಿರುವ ಮೋರಿಗಳ ನಿರ್ಮಾಣ ನಡೆಯುತ್ತಿದೆ.

ಅರ್ಧಕ್ಕೆ ಮೊಟಕುಗೊಂಡಿದ್ದ ರಸ್ತೆ ಕಾಮಗಾರಿಯೂ ಮುಂದುವರಿದಿದೆ. ಬೈಪಾಸ್ ರಸ್ತೆಗೆ ಸಿಮೆಂಟ್ ಕಾಂಕ್ರೀಟ್ ಹಾಕಿಸಲಾಗುವುದು ಎಂದು ವಿಧಾನಸಭಾ ಅಧ್ಯಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ. ಆದರೆ ಸಿಮೆಂಟ್ ರಸ್ತೆ ಹೋಗಲಿ ಗುಂಡಿ ಮುಚ್ಚಿದರೂ ಸಾಕು ಎಂಬುದು ಜನತೆಯ ಅಭಿಪ್ರಾಯ. ಹುಣಸೂರು ರಸ್ತೆಯ ಸೀಗೆತೋಡು ಸೇತುವೆಯಿಂದ ವಿರಾಜಪೇಟೆ ರಸ್ತೆಯ ನಯನ ಸಿನಿಮಾ ಮಂದಿರದವರೆಗೆ ರಸ್ತೆಯ ಎರಡು ಬದಿಗಳಲ್ಲಿ ಕಸದ ರಾಶಿಯೇ ತುಂಬಿದೆ. ಇಲ್ಲಿಯ ಗ್ರಾ.ಪಂ.ಗೆ ಕಸ ಹಾಕಲು ಬೇರೆ  ಸ್ಥಳವಿಲ್ಲ ಎಂಬುದು ಗ್ರಾ.ಪಂ. ಅಧ್ಯಕ್ಷ ರಾಜೇಶ್ ಅವರ ಸಬೂಬು. ಇದರಿಂದ ಪಟ್ಟಣದಲ್ಲಿ ಸೊಳ್ಳೆಗಳ ಕಾಟ, ಕೊಳೆತ ಕಸದ ವಾಸನೆ ಮೂಗಿಗೆ ರಾಚುತ್ತಿದೆ.

ಸರ್ಕಾರಿ ಹಿರಿಯ ಮಾದರಿ  ಪ್ರಾಥಮಿಕಶಾಲೆಯ ಎದುರಲ್ಲಿಯೇ ಕಸ ಸುರಿಯಲಾಗುತ್ತಿದೆ.ಇದರಿಂದ ಶಾಲೆಯ ಶುಚಿತ್ವಕ್ಕೆ ಅಡ್ಡಿಯಾಗಿ ಮಕ್ಕಳ ಆರೋಗ್ಯದ ಮೇಲೆ  ದುಷ್ಪರಿಣಾಮ ಬೀರುತ್ತಿದೆ ಎನ್ನುವುದು ಪೋಷಕರ ಅಳಲು. ಹೆಚ್ಚಾಗಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ನೂತನ ಬಡಾವಣೆಗಳು ತಲೆ ಎತ್ತುತ್ತಿದ್ದು ಪಟ್ಟಣ ದಿನದಿಂದ ದಿನಕ್ಕೆ ವ್ಯಾಪಕವಾಗಿ ಬೆಳೆಯುತ್ತಿದೆ. ಈ  ಈ ಎಲ್ಲ ಸಮಸ್ಯೆಗಳನ್ನು ಗ್ರಾ.ಪಂ. ಅರಿತುಕೊಂಡು ತ್ವರಿತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.