ಮೈಸೂರು: ಪ್ರಾಣಿಬಲಿ ನಿಷೇಧಿಸುವಂತೆ ಒತ್ತಾಯಿಸಿ ವಿವಿಧ ಗೋ ಸಂರಕ್ಷಣೆ ಸಂಘಟನೆಗಳ ಜೊತೆಗೂಡಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯು ನಗರದಿಂದ ಕಪ್ಪಡಿ ಶ್ರೀಕ್ಷೇತ್ರಕ್ಕೆ ಸೋಮವಾರ ರ‌್ಯಾಲಿ ಹೊರಟಿತು.
ನಗರದ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗ ಗೋವಿಗೆ ಆಹಾರ ತಿನ್ನಿಸುವ ಮೂಲಕ ರ‌್ಯಾಲಿಗೆ ಚಾಲನೆ ನೀಡಲಾಯಿತು.
ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ, ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ಗುರುಜ್ಞಾನೇಶ್ವರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಶ್ರೀರಂಗಪಟ್ಟಣದ ಆದಿಶಂಕರ ಮಠದ ಗಣೇಶ ಸ್ವರೂಪನಂದ ಸ್ವಾಮೀಜಿ ಸೇರಿದಂತೆ ವಿವಿಧ ಧರ್ಮ ಗುರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ದಯಾನಂದ ಸ್ವಾಮೀಜಿ ಅವರು ಮಾತನಾಡಿ, `1964 ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿ ಮಾಡಲಾಯಿತು. ಆದರೆ ಇದನ್ನು ಯಾರೂ ಪಾಲಿಸುತ್ತಿಲ್ಲ. ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ಜಾರಿ ಮಾಡಿ ಅಂಕಿತಕ್ಕಾಗಿ ರಾಷ್ಟ್ರಪತಿಗೆ ರವಾನಿಸಿತು. ಆದರೆ ಇದುವರೆಗೂ ಮಸೂದೆಗೆ ಅಂಕಿತ ಹಾಕಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.
`ಪ್ರಾಣಿ ಬಲಿ ನಿಷೇಧ ಮಾಡುವಂತೆ ಸುಪ್ರೀಂ ಕೋರ್ಟ್, ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ ಇದನ್ನು ಯಾರೂ ಪಾಲಿಸುತ್ತಿಲ್ಲ. ಜಾತ್ರೆಗಳು, ಕಸಾಯಿ ಖಾನೆಗಳಲ್ಲಿ ನಿರಂತರವಾಗಿ ಗೋವಂಶವನ್ನು ಹತ್ಯೆ ಮಾಡಲಾಗುತ್ತಿದೆ. ಗೋವಂಶವನ್ನು ಹತ್ಯೆ ಮಾಡದೆ ಉಳಿಸುವಂತೆ ಹಲವಾರು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ.
ಕೆ.ಆರ್.ನಗರ ತಾಲ್ಲೂಕಿನ ರಾಚಪ್ಪಾಜಿ, ಸಿದ್ದಪ್ಪಾಜಿ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಇದನ್ನು ತಡೆಯಲು ಸರ್ಕಾರ ವಿಫಲವಾಗಿದೆ. ಅಲ್ಲಿನ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕಪ್ಪಡಿ ಶ್ರೀಕ್ಷೇತ್ರಕ್ಕೆ ರ‌್ಯಾಲಿಯನ್ನು ಹಮ್ಮಿಕೊಳ್ಳ ಲಾಗಿದೆ. ಗೋಹತ್ಯೆ ನಿಷೇಧ ಮಸೂದೆಗೆ ಸಹಿ ಹಾಕುವಂತೆ ರಾಷ್ಟ್ರಪತಿ ಅವರನ್ನು ಒತ್ತಾಯಿಸು ವುದು ರ‌್ಯಾಲಿಯ ಉದ್ದೇಶ~ ಎಂದು ತಿಳಿಸಿದರು.
ಪಿಂಜರಾಪೋಲ್, ಗೋವಂಶ ರಕ್ಷಣೆಯ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.