ADVERTISEMENT

‘ಗೌಡನ ಕೆರೆ ಉಳಿಸಿ ಪ್ರವಾಸಿ ತಾಣವಾಗಿಸಿ’

​ಪ್ರಜಾವಾಣಿ ವಾರ್ತೆ
Published 17 ಮೇ 2018, 10:04 IST
Last Updated 17 ಮೇ 2018, 10:04 IST

ಶನಿವಾರಸಂತೆ: ‘ಕೊಡಗು ಜಿಲ್ಲೆಯ ಗಡಿಭಾಗ ಸಮೀಪದ ಯಸಳೂರು ಹೋಬಳಿಯ ಚಂಗಡಹಳ್ಳಿ ಮತ್ತು ಉಚ್ಚಂಗಿ ಗ್ರಾಮ ಪಂಚಾಯಿತಿ ಸುತ್ತ ಇರುವ ಹೇರೂರು ಬೆಟ್ಟ ಮತ್ತು ಗೌಡನ ಕೆರೆ ಉಳಿಸಿ, ಇವುಗಳನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು’ ಎಂದು ಪರಿಸರ ಹೋರಾಟಗಾರ ಎಚ್.ಕೆ.ರಮೇಶ್ ಆಗ್ರಹಿಸಿದ್ದಾರೆ.

‘ಹೇರೂರು ಬೆಟ್ಟವು ಸಾವಿರಾರು ಎಕರೆ ಸರ್ಕಾರಿ ಗೋಮಾಳವಾಗಿದೆ. ಇದು ಸಮುದ್ರಮಟ್ಟದಿಂದ 5 ಸಾವಿರ ಅಡಿ ಎತ್ತರದಲ್ಲಿದೆ. ಹೇರೂರು ಗವಿಬೆಟ್ಟದಲ್ಲಿ ಗಿಡಮರಗಳು, ಅಮೂಲ್ಯ ಗಿಡಮೂಲಿಕೆಗಳು, ಕಾಡುಕೋಣ, ಕಾಡುಕುರಿ, ಮೊಲ, ನವಿಲು, ಮುಳ್ಳುಹಂದಿ, ವಿವಿಧ ಬಗೆಯ ಪಕ್ಷಿಗಳು, ಹತ್ತಾರು ವಿಧದ ಚಿಟ್ಟೆಗಳು, ವಿವಿಧ ಜಾತಿಯ ಹಾವುಗಳು, ಹೆಜ್ಜೇನು, ಕಾಡುಜೇನು, ಕೋತಿಗಳನ್ನು ಕಾಣಬಹುದು. ಇದು ಚಾರಣಿಗರಿಗೆ ಸ್ವರ್ಗ’ ಎಂದು ವರ್ಣಿಸಿದ್ದಾರೆ.

ಗವಿಬೆಟ್ಟದ ತುದಿಯಲ್ಲಿ ಶಿಲೆಗಳಿಂದ ಆವೃತ್ತವಾಗಿರುವ ಯಾಣ ಮಾದರಿಯ ಯಾತ್ರಾಸ್ಥಳವಿದೆ. ಇಲ್ಲಿ ಗುಹಾಂತರ ದೇವಾಲಯವಿದ್ದು ಹಿಂದೆ ರುದ್ರಮುನಿ ವಾಸಿಸುತ್ತಿದ್ದ ಸ್ಥಳ ಎಂಬುದಕ್ಕೆ ಕುರುಹುಗಳಿವೆ.

ADVERTISEMENT

ಮಳೆ ಬಾರದಿದ್ದರೇ ಈ ಗುಹಾಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರೆ ಮಳೆ ಬೀಳುತ್ತದೆ ಎಂಬುದು ಸುತ್ತಮುತ್ತಲಿನ ಗ್ರಾಮಸ್ಥರ ಹೇಳಿಕೆ ಆಗಿದೆ. ಬೆಟ್ಟದಿಂದ ಅನತಿ ದೂರದಲ್ಲಿ ಸ.ನಂ.137ರಲ್ಲಿ 7 ಎಕರೆ 39 ಗುಂಟೆ ವಿಸ್ತೀರ್ಣದ ಹೇರೂರು ಗೌಡನ ಕೆರೆಯಿದೆ.

‘ಈ ಕೆರೆ ರೈತರ ಜೀವನಾಡಿಯಾಗಿದ್ದು ಪ್ರಾಣಿಪಕ್ಷಿಗಳು, ದನಕರುಗಳಿಗೆ ನೀರುಣಿಸುವ ಆಶ್ರಯ ತಾಣವಾಗಿದೆ.ಮಳೆಗಾಲದಲ್ಲಿ ಕೆರೆ ತುಂಬಿ ಹರಿದು ರೈತರ ಗದ್ದೆಗಳಿಗೆ ನೀರಾಗುತ್ತದೆ. ಕೆರೆ ತಳಭಾಗದಲ್ಲಿ ಇರುವ ಸಾವಿರಾರು ಎಕರೆ ಪ್ರದೇಶದಲ್ಲಿ ಕಾಫಿ, ಮೆಣಸು, ಶುಂಠಿ, ತರಕಾರಿ, ಬೆಳೆಯುವ ರೈತರಿಗೆ ಅನುಕೂಲವಾಗುತ್ತಿದೆ’ ಎಂದು ರಮೇಶ್ ಹೇಳಿದ್ದಾರೆ.

‘ಕೆರೆಯ ಸುತ್ತಲೂ ಕೆಲವು ರೈತರು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಬೇಕು. ಕೆರೆಯ ಹೂಳು ತೆಗೆಸಿ ಸುತ್ತಲೂ ಗಿಡಮರ ಬೆಳೆಸಿ ಉದ್ಯಾನ ಮಾಡಿದರೆ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಬಹುದು’ ಎಂದು ಅವರು ಸಲಹೆ ನೀಡಿದ್ದಾರೆ.

ಕೃಷಿಕ ಸಮಾಜದ ಉಪಾಧ್ಯಕ್ಷ ಎಚ್.ಟಿ.ಗಣೇಶ್, ಪರಿಸರ ಹೋರಾಟಗಾರರಾದ ಕರುಣ್ ಕುಮಾರ್, ಸಂತೋಷ್, ದೇಜಪ್ಪ ಇತರರು ಕೂಡ ಇದೇ ಆಗ್ರಹವನ್ನು ಮಾಡಿದ್ದಾರೆ.

ಗವಿಬೆಟ್ಟ ಇತ್ತೀಚಿನ ದಿನಗಳಲ್ಲಿ ಭೂಮಾಫಿಯದವರ ಕಣ್ಣಿಗೆ ಬಿದ್ದಿದ್ದು ಹೇಮಾವತಿ ನದಿ ಸಂತ್ರಸ್ಥರ ಹೆಸರಿನಲ್ಲಿ ಪಹಣಿ ಮಾಡಿಸಿ, ಜಾಗವನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳುತ್ತಿದ್ದಾರೆ.ಈ ಅಕ್ರಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ತಹಶಿಲ್ದಾರ್, ಸರ್ವೇಯರ್, ಹಾಗೂ ರಾಜಕೀಯ ಪುಡಾರಿಗಳು ಅಧಿಕಾರಿಗಳ ಜತೆ ಶಾಮಿಲಾಗಿದ್ದಾರೆ.ನೂರಾರು ಎಕರೆ ಸರ್ಕಾರಿ ಜಮೀನನ್ನು ನುಂಗಿ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ದಂಧೆಗೆ ಕಡಿವಾಣ ಹಾಕಬೇಕು. ಗವಿಬೆಟ್ಟವನ್ನು ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿ ತಾಣವಾಗಿಸಲು ಅನುದಾನ ಬಿಡುಗಡೆ ಮಾಡಿಸುವಂತೆಯೂ ಎಚ್.ಕೆ.ರಮೇಶ್ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.