ADVERTISEMENT

ಗ್ರಾಮಸಭೆಗೆ ಸದಸ್ಯರ ಗೈರು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 9:09 IST
Last Updated 19 ಜುಲೈ 2013, 9:09 IST

ನಾಪೋಕ್ಲು: ಸಮೀಪದ ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ನಡೆದ ಕಾಂತೂರು- ಮೂರ್ನಾಡು ಗ್ರಾಮಸಭೆಯಲ್ಲಿ ಹಲವು ಸದಸ್ಯರು ಹಾಗೂ ಅಧಿಕಾರಿಗಳ ಗೈರುಹಾಜರಿ ಎದ್ದುಕಾಣುತ್ತಿತ್ತು. ಇದರಿಂದ ಆಕ್ರೋಶ ಗೊಂಡ ಜನ ಸಭೆಯಿಂದ ದೂರ ಉಳಿದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಸಭೆ ಆರಂಭಕ್ಕೆ ಮಾತನಾಡಿದ ಪೂರ್ಣಿಮಾ, ರಾಮಮಂದಿರ ಬಳಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಂಡಿಲ್ಲ. ರಾಮ ಮಂದಿರ ಬಳಿ ಅನೇಕ ವಾಸದ ಮನೆಗಳು ಇದ್ದು ಗ್ಯಾರೆಜ್‌ಗಳಿಗೆ ಪಂಚಾಯಿತಿಯಿಂದ ಪರವಾನಗಿ ನೀಡಲಾಗಿದೆ. ಗ್ಯಾರೆಜ್‌ಗಳ ಶಬ್ದದಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ರಾಬಿನ್ ಕುಟ್ಟಪ್ಪ ಮಾತನಾಡಿ, ಐಕೊಳ ಗ್ರಾಮಕ್ಕೆ ಕುಡಿಯಲು ಕಿರು ನೀರಿನ ಯೋಜನೆ ಪೂರ್ಣಗೊಂಡಿದ್ದು ಇದುವರೆಗೂ ನೀರು ಸರಬರಾಜು ಆಗಿಲ್ಲ. ಗ್ರಾಮ ಪಂಚಾಯಿತಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೂರ್ನಾಡು ಗ್ರಾಮದಲ್ಲಿ ಸಾರ್ವ ಜನಿಕ ಶೌಚಾಲಯ, ಮಾರುಕಟ್ಟೆಗಳಲ್ಲಿ ಸ್ವಚ್ಛತೆ ಇಲ್ಲ. ಸಾರ್ವಜನಿಕ ಶೌಚಾಲಯದ ಬಳಿ ಕಸದ ರಾಶಿ ಕೊಳೆತು ನಾರುತ್ತಿದೆ. ಕಸ ವಿಲೇವಾರಿ, ಶುಚಿತ್ವದೆಡೆಗೆ ಗಮನಹರಿಸುವಂತೆ ಅವರು ಆಗ್ರಹಿಸಿದರು.

ಗ್ರಾಮಸ್ಥ ಗುಲ್ಶನ್ ಮಾತನಾಡಿ, ಮೂರ್ನಾಡುವಿನಿಂದ ಕುಂಬಳದಾಳುವಿಗೆ ಸಾಗುವ ರಸ್ತೆಯಲ್ಲಿ ವಾಹನ ನಿಲುಗಡೆಯಿಂದ ಶಾಲಾ ಮಕ್ಕೃಳಿಗೆ ತೊಂದರೆ ಉಂಟಾಗುತ್ತಿದೆ. ಇದನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಬೇನಾಮಿ ಹೆಸರಿನಲ್ಲಿ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಆಶ್ರಯ, ಬಸವ ಜಯಂತಿ ಮೊದಲಾದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಳಂಗಂಡ ಅಪ್ಪಣ್ಣ ಸಭೆಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯೊಕ್ಕಡ ಪೊನ್ನು ಮುತ್ತಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೋಡೆಲ್ ಅಧಿಕಾರಿ ಶಿವರಾಮ್, ಜಿಲ್ಲಾ ಪಂಚಾಯಿತಿ ಸದಸ್ಯ ಕಡ್ಡಿ ಸುಂದರ್, ತಾಲ್ಲೂಕು ಪಂಚಾಯಿತಿ ಸದಸ್ಯ ವಿ.ವಿ. ಹರೀಶ್ ಕುಮಾರ್, ಪಿಡಿಒ ಬಿ.ಬಿ. ಚಂಗಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಆರೋಗ್ಯ ತಪಾಸಣಾ ಶಿಬಿರ
ಸೋಮವಾರಪೇಟೆ: ವಾಜಪೇಯಿ ಆರೋಗ್ಯಶ್ರೀ ಯೋಜನೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಜುಲೈ 19ರಂದು ಬೆಳಿಗ್ಗೆ 10ಕ್ಕೆ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಯೋಜನೆಯ ಆರೋಗ್ಯ ಮಿತ್ರ ಪುಟ್ಟಸ್ವಾಮಿ ತಿಳಿಸಿದ್ದಾರೆ.

ಶಿಬಿರದಲ್ಲಿ ಸಪ್ತಗಿರಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಭಾಗವಹಿಸಲಿದ್ದು, ಹೃದಯ ಸಂಬಂಧಿ ಕಾಯಿಲೆ, ನರರೋಗ ಹಾಗೂ ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿ ರುವವರು ಶಿಬಿರದಲ್ಲಿ ಭಾಗವಹಿ ಸಬಹುದು ಎಂದರು.

ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ತಪಾಸಣೆ, ಚಿಕಿತ್ಸೆ ಹಾಗೂ ಪ್ರಯಾಣ ಭತ್ಯೆಯನ್ನು ಸರ್ಕಾರವೇ ಭರಿಸಲಿದ್ದು, ವೈದ್ಯರ ಸಲಹೆ ಮೇರೆಗೆ ಶಿಬಿರದಲ್ಲಿ ಇ.ಸಿ.ಜಿ, ಎಕೋ, ಸ್ಕ್ಯಾನಿಂಗ್‌ಗಳನ್ನು ಉಚಿತವಾಗಿ ಮಾಡಲಾಗುವದು. ಮಾಹಿತಿಗೆ ಮೊ: 72590 03452 ನ್ನು ಸಂಪರ್ಕಿ ಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.