ADVERTISEMENT

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಯೋಜನೆ ಸಿದ್ಧ

ಕೊಡಗಿನಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ: ಸಚಿವರ ಘೋಷಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 8:55 IST
Last Updated 16 ಆಗಸ್ಟ್ 2016, 8:55 IST
ಮಡಿಕೇರಿಯ ಹಳೆಕೋಟೆ ಆವರಣದಲ್ಲಿ ಸೋಮವಾರ ಸ್ವಾತಂತ್ರ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ನೃತ್ಯ ರೂಪಕ
ಮಡಿಕೇರಿಯ ಹಳೆಕೋಟೆ ಆವರಣದಲ್ಲಿ ಸೋಮವಾರ ಸ್ವಾತಂತ್ರ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ನೃತ್ಯ ರೂಪಕ   

ಮಡಿಕೇರಿ: ‘ಕೊಡಗು ಜಿಲ್ಲೆಯ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡುವ ಸಂಕಲ್ಪ ಮಾಡೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಮನವಿ ಮಾಡಿದರು.

ನಗರದ ಹಳೆಕೋಟೆ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಸಮಸ್ಯೆಗಳ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡಿರುವೆ. ಆದ್ಯತೆ ಮೇರೆಗೆ ಎಲ್ಲ ಸಮಸ್ಯೆಗಳನ್ನು ಕಾಲ ಮಿತಿಯೊಳಗೆ ಇತ್ಯರ್ಥ ಪಡಿಸುತ್ತೇನೆ’ ಎಂದು ಕೊಡಗಿನ ಜನರಿಗೆ ಭರವಸೆ ನೀಡಿದರು.

ಹಸಿವು, ಬಡತನ, ದಾರಿದ್ರ್ಯ, ಅನಕ್ಷರತೆ, ಅಸಮಾನತೆ, ನಿರುದ್ಯೋಗ ದೂರ ಮಾಡಿದಾಗ ನಿಜವಾದ ಸ್ವಾತಂತ್ರ್ಯ ದೊರಕಿದೆ ಎಂದರ್ಥ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಅನ್ನಭಾಗ್ಯ, ಕ್ಷೀರಭಾಗ್ಯ, ಋಣಮುಕ್ತ ಭಾಗ್ಯ, ಕೃಷಿ ಭಾಗ್ಯ, ಸೂರುಭಾಗ್ಯ, ಮನಸ್ವಿನಿ, ಮೈತ್ರಿ, ವಿದ್ಯಾಸಿರಿ... ಹೀಗೆ ಹಲವು ವಿನೂತನ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸೀತಾರಾಂ ಹೇಳಿದರು.

ಕೊಡಗು ಜಿಲ್ಲೆಯ ಕೃಷಿ ಇಲಾಖೆಗೆ ಬಿತ್ತನೆ ಬೀಜಗಳು, ಸಾವಯವ ಗೊಬ್ಬರ ಮತ್ತು ಕೃಷಿ ಯಂತ್ರೋಪಕರಣಗಳು, ಸಸ್ಯ ಸಂರಕ್ಷಣ ಔಷಧಮುಂತಾದ ಕೃಷಿ ಪರಿಕರಗಳನ್ನು ವಿತರಿಸಲು ₹ 3.71 ಕೋಟಿ ಅನುದಾನ ನಿಗದಿ ಮಾಡಲಾಗಿದೆ. ಸಾವಯವ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಜಿಲ್ಲೆಯ 13 ಹೋಬಳಿಗಳಲ್ಲಿ ಸಾವಯವ ಭಾಗ್ಯ ಯೋಜನೆ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿ ₹ 1.52 ಕೋಟಿ ಅನುದಾನದಲ್ಲಿ ಕೃಷಿ ಹೊಂಡ, ತೊಟ್ಟಿಲು ಗುಂಡಿ ಕಾಮಗಾರಿಗಳನ್ನು ಜಲಾನಯನ ವಿಭಾಗದಿಂದ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಅಂದಾಜು 13 ವಾರಗಳಿಗೆ 50,414 ಮೆಟ್ರಿಕ್‌ ಟನ್‌ ಮೇವಿನ ಲಭ್ಯತೆ ಇದ್ದು ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿಲ್ಲ. ಮಹಶೀರ್ ಮೀನು ಮರಿಗಳ ಉತ್ಪಾದನೆಗೆ ಮೀಸಲಿಟ್ಟಿರುವ ಹಾರಂಗಿಯಲ್ಲಿರುವ ರಾಜ್ಯದ ಏಕೈಕ ಉತ್ಪಾದನಾ ಕೇಂದ್ರವನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಡಿ ₹ 1 ಕೋಟಿ ಅನುದಾನದಲ್ಲಿ ಪುನಶ್ಚೇತನ ಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಸರ್ಕಾರವು ವಿಶೇಷ ಒತ್ತು ನೀಡಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯ ಅಡಿ ₹ 3.25 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ನಬಾರ್ಡ್ ಯೋಜನೆ ಅಡಿ ಮಲ್ಲಳ್ಳಿ ಜಲಪಾತಕ್ಕೆ ತೆರಳುವ 2.80 ಕಿ.ಮೀ.ಗಳ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ₹ 3.19 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

‘ಪೋಡಿ ಮುಕ್ತ ಗ್ರಾಮ ಯೋಜನೆ’ ಅಡಿಯಲ್ಲಿ ಕೊಡಗು ಜಿಲ್ಲೆಯ 56 ಗ್ರಾಮಗಳಲ್ಲಿನ ಎಲ್ಲಾ ಬಹುಮಾಲೀಕತ್ವದ ಪಹಣಿದಾರರ ಜಮೀನುಗಳನ್ನು ಉಚಿತವಾಗಿ ಅಳತೆ ಮಾಡಿ ನಕ್ಷೆ ತಯಾರಿಸಿ, ಪ್ರತ್ಯೇಕ ಪಹಣಿ ನೀಡಲಾಗಿದೆ. ಈ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ 4 ಸಾವಿರ ಜನರು ಈ ಯೋಜನೆ ಪ್ರಯೋಜನ ಪಡೆದುಕೊಂಡಿದ್ದಾರೆ.

ಪ್ರತಿ ತಾಲ್ಲೂಕಿನ 5 ಗ್ರಾಮಗಳಂತೆ ಒಟ್ಟು 15 ಗ್ರಾಮಗಳ ಸರ್ವೆ ಕಾರ್ಯವು ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಸದರಿ ಯೋಜನೆಯನ್ನು ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.
ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಪ್ರಸಕ್ತ ಸಾಲಿಗೆ ಜಿಲ್ಲೆಯ ಕೆ.ನಿಡುಗಣೆ, ಕೂಡಿಗೆ, ಪೊನ್ನಂಪೇಟೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‌ ಕುಮಾರ್‌ ಮೊದಲಾದವರು ಹಾಜರಿದ್ದರು.

ಕಾವೇರಿ ವಾಹನ ಮಾಲೀಕರ ಸಂಘ
ಮಡಿಕೇರಿ: ನಗರ ಕಾವೇರಿ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ 70ನೇ ಸ್ವಾತಂತ್ರ್ಯೋತ್ಸವ ವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಉದ್ಯಮಿ ಪುಲಿಯಂಡ ಜಗದೀಶ್ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ದೇಶಕ್ಕೆ ದೊರೆತ ಸ್ವಾತಂತ್ರ್ಯವನ್ನು ಮುಂದಿನ ಪೀಳಿಗೆಗೆ ಉಳಿಸುವ ಮತ್ತು ಸಾಕಾರಗೊಳಿಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಕಾವೇರಿ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಬಿ. ಜೈಜಗದೀಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಚಾಯ್ಸ್ ಹೋಟೆಲ್ ಮಾಲೀಕ ರತೀಶ್, ಸಂಘದ ಕಾರ್ಯದರ್ಶಿ ಲೋಕೇಶ್, ಖಜಾಂಚಿ ಸುಂದರ ಬಂಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.