ADVERTISEMENT

ಗ್ರಾಮ ಸಭೆ: ಫಲಾನುಭವಿಗಳ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:38 IST
Last Updated 3 ಸೆಪ್ಟೆಂಬರ್ 2013, 6:38 IST

ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆ ಅಧ್ಯಕ್ಷೆ ಜೈನಾಬಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಈಚೆಗೆ ನಡೆಯಿತು.

ಸಭೆಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಸಣ್ಣರೈತರು ಹಾಗೂ ಸಣ್ಣ ಭೂಹಿಡುವಳಿದಾರರ ಜಮೀನು ಅಭಿವೃದ್ಧಿ ಹಾಗೂ ತೋಟಗಾರಿಕೆ ಅಭಿವೃದ್ಧಿಪಡಿಸಲು ಫಲಾನುಭವಿಗಳ ಪಟ್ಟಿ, ವಸತಿರಹಿತರ ಮತ್ತು ನಿವೇಶನರಹಿತ ಫಲಾನುಭವಿಗಳ ಪಟ್ಟಿ, ಉದ್ಯೋಗ ಖಾತ್ರಿ ಯೋಜನೆ ಮತ್ತು ನಮ್ಮ ಹೊಲ, ನಮ್ಮ ರಸ್ತೆ ಯೋಜನೆಯಡಿ ಮಾಡುವ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಲಾಯಿತು.

ಪಂಚಾಯಿತಿ ಸದಸ್ಯ ಡಿ.ಪಿ. ಬೋಜಪ್ಪ ಮಾತನಾಡಿ, ರಾಜ್ಯ ಸರ್ಕಾರದ ನೂತನ ಯೋಜನೆ ರಾಜೀವಗಾಂಧಿ ಇತಿಹಾಸ ಮತ್ತು ಕಾನೂನು ಕಾರ್ಯಕ್ರಮದಲ್ಲಿ ಪಂಚಾಯಿತಿ ಮುಂಭಾಗ ಗ್ರಾಮ ಸೇವಾ ಕೇಂದ್ರವನ್ನು ರೂ.10 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಕಾಮಗಾರಿಯನ್ನು ಆರಂಭಿಸಲಾಗಿದೆ. ಈ ಜಾಗ ಅರಣ್ಯ ಇಲಾಖೆಯ ಊರುಡುವೆ ಜಾಗವಾಗಿದೆ. 1976ರಲ್ಲಿ ಗ್ರಾಮ ಪಂಚಾಯಿತಿ ಕಚೇರಿಯನ್ನು ನಿರ್ಮಿಸಲಾಗಿದೆ. ಆದರೆ, ಇದುವರೆಗೂ ಕನ್‌ವರ್ಷನ್ ಆಗಿಲ್ಲ.

ಈಗ ಕಟ್ಟಡ ನಿರ್ಮಾಣಕ್ಕೆ ಅರಣ್ಯ ಇಲಾಖೆಯವರು ತಡೆಯೊಡ್ಡುತ್ತಿದ್ದಾರೆ. ಆದ್ದರಿಂದ ಗ್ರಾಮಸ್ಥರ ಸಹಕಾರವನ್ನು ಕೋರುವ ಉದ್ದೇಶದಿಂದ ವಿಶೇಷ ಗ್ರಾಮ ಸಭೆ ಕರೆಯಲಾಗಿದೆ ಎಂದರು.

ಸಭೆಯಲ್ಲಿದ್ದ ಅರಣ್ಯ ವನಪಾಲಕ ಸುಂದರಮೂರ್ತಿ ಅವರು ಸುಪ್ರಿಂ ಕೋರ್ಟಿನ ಆದೇಶಪತ್ರವನ್ನು ಸಭೆಯ ಮುಂದಿಟ್ಟು 2002ರ ಕೋರ್ಟ್ ಆದೇಶದಂತೆ ಊರುಡುವೆ ಜಾಗಗಳು ಅರಣ್ಯ ಇಲಾಖೆಗೆ ಒಳಪಡುತ್ತವೆ. ಅದರಂತೆಯೇ ಇಲಾಖೆ ನಡೆದುಕೊಂಡಿದೆ ಎಂದು ಅವರು ಹೇಳಿದರು.

ಕಾಜೂರು ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗದಲ್ಲಿ ಬಡವರಿಗೆ ಮನೆ ಕಟ್ಟಿಕೊಳ್ಳಲು ಗ್ರಾಮ ಪಂಚಾಯಿತಿ ಒಪ್ಪಿಗೆ ನೀಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಪಂಚಾಯಿತಿ ಮುಂಭಾಗ ಗ್ರಾಮ ಸೇವಾ ಕೇಂದ್ರವನ್ನು ಕಟ್ಟಲು ವಿರೋಧಿಸಿದ ಕೆಲವು ಗ್ರಾಮಸ್ಥರನ್ನು ಹಾಗೂ ಅರಣ್ಯ ಇಲಾಖೆಯನ್ನು ಕಡೆಗಣಿಸಿ ಕಟ್ಟಡ ನಿರ್ಮಿಸುವಂತೆ ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಪಂಚಾಯಿತಿ ಆಡಳಿತ ಮಂಡಳಿಗೆ ಪ್ರೋತ್ಸಾಹ ನೀಡಿದರು.

ಪಂಚಾಯಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ, ಸದಸ್ಯರಾದ ಎಸ್.ಪಿ. ಭಾಗ್ಯ, ಶುಭಾಂಗಿನಿ, ಹೂವಮ್ಮ, ಲಲಿತಾ, ಮತ್ತಮ್ಮ, ಎಸ್.ಜೆ. ರಾಜಪ್ಪ, ಪುರುಷೋತ್ತಮ್, ದಿವಾಕರ್, ಡಿ.ಟಿ. ರಾಜು, ಸಿ.ಬಿ.ಅಬ್ಬಾಸ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಪಿ. ಚಂದ್ರೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮತಿ, ಎಂಜಿನಿಯರ್ ಅಶೋಕ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.