ಗೋಣಿಕೊಪ್ಪಲು: ಮಡಿಕೇರಿಯಲ್ಲಿ ಜ. 7ರಿಂದ 9ರವರೆಗೆ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿವಿಧ ರೀತಿಯಲ್ಲಿ ಗಮನ ಸೆಳೆಯಲಿದೆ. ತಗ್ಗು ದಿಣ್ಣೆ ಹಳ್ಳಕೊಳ್ಳಗಳ ನಡುವಿನ ಸುಂದರ ನಿಸರ್ಗ ತಾಣದಲ್ಲಿ ನಿರ್ಮಾಣಗೊಂಡಿರುವ ಫೀಲ್ಡ್‌ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಆವರಣ ಇದಕ್ಕೆ ಸಾಕ್ಷಿಯಾಗಲಿದೆ.
ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿ ರಾಜ್ಯದ ವಿವಿಧ ಭಾಗಗಳ ಶಿಲ್ಪಕಲೆ, ಚಿತ್ರಕಲೆ ಪ್ರರ್ದಶನಗೊಳ್ಳುತ್ತಿದೆ. ಇದರ ಜತೆಗೆ ಛಾಯಾಚಿತ್ರ ಪ್ರದರ್ಶನವೂ ನಡೆಯಲಿದೆ. ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬೃಹತ್ ಪ್ರಮಾಣದ ಛಾಯಾಚಿತ್ರಗಳ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ‘ದೇಸಿ ಕನ್ನಡ ಪರಂಪರೆ’ ಮತ್ತು ‘ಕೊಡಗು ಪರಂಪರೆ’ ಹೆಸರಿನ ಎರಡು ವಿಭಾಗಗಳಲ್ಲಿ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಸಾಕ್ಷ್ಯಚಿತ್ರ ನಿರ್ದೇಶಕ ಹಾಗೂ ಜಾನಪದ ತಜ್ಞ ಸಿರಿಗಂಧ ಶ್ರೀನಿವಾಸಮೂರ್ತಿ ಅವರು ದೇಸಿ ಪರಂಪರೆಯ ಅಪರೂಪದ ಛಾಯಾಚಿತ್ರಗಳ ಪ್ರದರ್ಶಿಸಲು ತಯಾರಿ ನಡೆಸಿದ್ದಾರೆ. ಮುಖ್ಯ ವೇದಿಕೆಯ ಸಮೀಪದಲ್ಲೇ ಈ ಛಾಯಾಚಿತ್ರಗಳನ್ನು ನೋಡುವ ಅವಕಾಶ ಕನ್ನಡಾಭಿಮಾನಿಗಳಿಗೆ ಲಭಿಸಲಿದೆ. ಆಧುನಿಕತೆಯ ಭರದಲ್ಲಿ ನಶಿಸುತ್ತಿರುವ ದೇಸಿ ಸಂಸ್ಕೃತಿ ಛಾಯಾಚಿತ್ರ ಮೂಲಕ ಜನತೆಯ ಮುಂದೆ ತೆರೆದುಕೊಳ್ಳುತ್ತಿದೆ.
ಸಿರಿಗಂಧ ಜಾನಪದ ಧಾರಾವಾಹಿ ಖ್ಯಾತಿಯ ಬೆಂಗಳೂರಿನ ವಿ. ಶ್ರೀನಿವಾಸಮೂರ್ತಿ ಕೊಡಗು ಮತ್ತು ಇಡೀ ನಾಡನ್ನು ಕಳೆದ 30 ವರ್ಷಗಳಿಂದ ಚೆನ್ನಾಗಿ ಬಲ್ಲವರು. ವಿವಿಧ ಸಂಸ್ಕೃತಿಯ ಅಪರೂಪದ ಫೋಟೋಗಳು ಅವರ ಬಳಿ ಇವೆ. ಮತ್ತೆ ಕೆಲವು ಈಚೆಗೆ ತೆಗೆದವು. ಕೊಡಗು ಪರಂಪರೆಗೆ ಸಂಬಂಧಿಸಿದ 150 ಹಾಗೂ ಕನ್ನಡ ಪರಂಪರೆಯ 100 ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ. ಒಂದೊಂದು ಚಿತ್ರಗಳು ಎರಡು ಅಡಿ ಸುತ್ತಳತೆಯಿಂದ ಆರು ಅಡಿಯವರೆಗೂ ಇರಲಿವೆ ಎಂದು ಶ್ರೀನಿವಾಸಮೂರ್ತಿ ತಿಳಿಸಿದರು.
‘ಒಂದು ಸಾವಿರ ಛಾಯಾಚಿತ್ರಗಳ ಪ್ರದರ್ಶನ ಮಾಡಬೇಕು ಎಂಬ ಹಂಬಲ ಇತ್ತು. ಆದರೆ, ಜಾಗದ ಕೊರತೆಯಿಂದ ಕೇವಲ 200 ಚಿತ್ರಗಳನ್ನು ಮಾತ್ರ ಪ್ರದರ್ಶನಕ್ಕೆ ಇಡುತ್ತಿದ್ದೇನೆ. ಈ ಹಿಂದೆ ಬೆಳಗಾವಿಯಲ್ಲಿ ನಡೆದ ‘ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ’ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಲ್ಲ ವ್ಯವಸ್ಥೆ ಮಾಡಿತ್ತು. ಆದರೆ, ಮಡಿಕೇರಿ ಸಮ್ಮೇಳನದಲ್ಲಿ ಮಳಿಗೆಯನ್ನಾದರೂ ಉಚಿತವಾಗಿ ನೀಡಲು ಅಧ್ಯಕ್ಷ ಟಿ.ಪಿ. ರಮೇಶ್ ಒಪ್ಪಿಗೆ ಸೂಚಿಸಿದ್ದಾರೆ. ಅವರ ಅನುಮತಿ ಪಡೆದು ₨ 2 ಲಕ್ಷ ವೆಚ್ಚ ತಗಲುವ ಛಾಯಾಚಿತ್ರ ಪ್ರರ್ದಶನವನ್ನು ಸ್ವಂತ ಖರ್ಚಿನಿಂದಲೇ ಮಾಡುತ್ತಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.