ADVERTISEMENT

ಜನಮೆಚ್ಚಿದ ಸರ್ಕಾರ ಬಿಜೆಪಿ:ಡಿ.ವಿ. ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 5:10 IST
Last Updated 16 ಅಕ್ಟೋಬರ್ 2012, 5:10 IST

ಮಡಿಕೇರಿ: ಮಾಜಿ ಸಿಎಂ ಸದಾನಂದಗೌಡ ಅವರು ಕುಟುಂಬ ಸಮೇತರಾಗಿ ಸೋಮವಾರ ಭಾಗಮಂಡಲ ಮತ್ತು ತಲಕಾವೇರಿಗೆ ತೆರಳಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು.

ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ಸಂಗಮ ತ್ರಿವೇಣಿಯಲ್ಲಿ ಪುಣ್ಯಸ್ನಾನ ಮಾಡಿ ಹೋಮ-ಹವನ ಮತ್ತು ಪಿಂಡ ಪ್ರದಾನ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿ.ವಿ.ಸದಾನಂದಗೌಡ ಅವರು ಬಿಜೆಪಿ ಸರ್ಕಾರ ಕಳೆದ ನಾಲ್ಕುವರೆ ವರ್ಷದಲ್ಲಿ ಜನಸಾಮಾನ್ಯರು ಮೆಚ್ಚುವ ರೀತಿಯಲ್ಲಿ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದು, 5 ವರ್ಷಗಳ ಅವಧಿ ಪೂರ್ಣಗೊಳಿಸಲಿದೆ ಎಂದು ಅವರು ಹೇಳಿದರು.

ಗ್ರಾಮೀಣ ಜನರಿಗೆ ಹಾಗೂ ರಾಜ್ಯದ ಎಲ್ಲ ಸಮುದಾಯಗಳ ಶ್ರೇಯೋಭಿವದ್ಧಿಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ಆಡಳಿತ ನೀಡಲಾಗಿದೆ ಎಂದು ಅವರು ನುಡಿದರು.

ಕಳೆದ ನಾಲ್ಕುವರೆ ವರ್ಷಗಳಲ್ಲಿ ಇಬ್ಬರು ಮುಖ್ಯಮಂತ್ರಿಗಳು ಬದಲಾದರೂ ಸಹ ಅಭಿವದ್ಧಿಗೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ಮನಗಾಣಬೇಕು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ತಲಕಾವೇರಿಗೆ ತೆರಳಿದ ಡಿ.ವಿ.ಸದಾನಂದಗೌಡರು, ಪತ್ಮಿ ಡಾಟಿ ಸದಾನಂದಗೌಡ ಮತ್ತು ಪುತ್ರ ಕಾರ್ತಿಕ್ ಅವರು ಕುಂಕುಮಾರ್ಚಣೆ ವಿಶೇಷ ಪೂಜೆ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ, ಉಪಾಧ್ಯಕ್ಷೆ ಬಿದ್ದಂಡ ಉಷಾದೇವಮ್ಮ, ಮಾಜಿ ಶಾಸಕ ಎಸ್.ಜಿ. ಮೇದಪ್ಪ, ಕೋಡಿ ಪೊನ್ನಪ್ಪ, ಭಾಗಮಂಡಲ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮನುಮುತ್ತಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಬಿ.ಭಾರತೀಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪ್ರತಿಜಾ, ಆರ್ಚಕರಾದ ನಾರಾಯಣಾಚಾರ್, ರಾಬಿನ್ ದೇವಯ್ಯ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಸಂಪತ್‌ಕುಮಾರ್, ರಮೇಶ್ ಹೊಳ್ಳ, ಕೆ.ಜೆ.ಭರತ್, ಸದಾನಂದಗೌಡರ ಕುಟುಂಬದವರು ಮತ್ತಿತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.