ಮಡಿಕೇರಿ: ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಭಾನುವಾರ ನಡೆದ ಕಸಾಪ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಕಸಾಪ ಜಿಲ್ಲಾ ಘಟಕವು ಬೆಂಗಳೂರಿಗೆ ನಿಯೋಗ ತೆರಳಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿ ಮಾಡಿ ಸಮ್ಮೇಳನದ ಪೂರ್ವಸಿದ್ಧತೆ ಕೈಗೊಳ್ಳುವ ಬಗ್ಗೆ ಸಭೆ ಕರೆಯುವಂತೆ ಆಹ್ವಾನ ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಸಮ್ಮೇಳನ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿಯೇ ನಾನಾ ಪುಸ್ತಕ ಪ್ರಕಟಣೆ ಹೊರತರಲಾಗುತ್ತಿದ್ದು, ಆ ದಿಸೆಯಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಕಲೆ, ಸಾಹಿತ್ಯ, ಜನಪದ, ಕ್ರೀಡೆ, ಸೇನೆ, ಕೃಷಿ ಹೀಗೆ ವಿವಿಧ ಪ್ರಕಾರದ ಸಾಹಿತ್ಯಾಭಿರುಚಿಯ ಲೇಖನಗಳನ್ನು ಹೊರತರಲು ಅವಕಾಶವಿದೆ ಎಂದರು.
ಜಿಲ್ಲೆಯ ಲೇಖಕರು ಗುಣಾತ್ಮಕ ಬರಹಗಳನ್ನು ಕಸಾಪ ಜಿಲ್ಲಾ ಘಟಕಕ್ಕೆ ಕಳುಹಿಸಿಕೊಡುವಂತೆ ಅವರು ಕೋರಿದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸುವ ಸ್ಥಳ, ದಿನಾಂಕ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಜಿಲ್ಲಾ ಕಸಾಪ ಕಾರ್ಯದರ್ಶಿ ಬಿ.ಎ.ಷಂಶುದ್ದೀನ್, ಬಿ.ಎಂ.ಕೆ.ವಾಸು ರೈ, ಶ್ವೇತಾ ರವೀಂದ್ರ, ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಮುನೀರ್ ಅಹಮದ್, ಎಂ.ಪಿ. ಕೇಶವ ಕಾಮತ್, ಬಿ.ಎನ್. ಪ್ರಕಾಶ್, ಶ್ರಿಧರ ಹೆಗಡೆ, ಮಹಾಬಲೇಶ್ವರ ಭಟ್, ಜೆ.ಸಿ. ಶೇಖರ್, ಜಲಜಾ ಶೇಖರ್, ಪುಷ್ಪಾ ಸಮ್ಮೇಳನ ಹಮ್ಮಿಕೊಳ್ಳುವ ಕುರಿತು ಹಲವು ಸಲಹೆಗಳನ್ನು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.