ADVERTISEMENT

ತಗ್ಗಿದ ಮಳೆ ಆರ್ಭಟ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 7:18 IST
Last Updated 21 ಜೂನ್ 2013, 7:18 IST
ಕೊಡಗು ಜಿಲ್ಲೆಯ ದುಬಾರೆಯ ಬಳಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ.
ಕೊಡಗು ಜಿಲ್ಲೆಯ ದುಬಾರೆಯ ಬಳಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ.   

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಸುರಿಯುತ್ತಿದ್ದ ಮುಂಗಾರು ಮಳೆಯ ರಭಸ ಗುರುವಾರ ಕೊಂಚ ಕಡಿಮೆಯಾಗಿದೆ.

ಮಳೆಯ ಆರ್ಭಟ ಕಡಿಮೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬತ್ತ, ರಾಗಿ, ಜೋಳ ಸೇರಿದಂತೆ ಮತ್ತಿತರ ಬೆಳೆಗಳ ಬಿತ್ತನೆ ಕಾರ್ಯ ಭರದಿಂದ ಸಾಗಿದೆ.

ಮಡಿಕೇರಿಯಲ್ಲಿಯೂ ಕೂಡ ಮಳೆಯ ಆರ್ಭಟ ಕಡಿಮೆಯಾಗಿದ್ದು, ದಿನವಿಡೀ ಮೋಡ ಮಸುಕಿದ ವಾತಾವರಣದೊಂದಿಗೆ ಆಗಾಗ ತುಂತುರು ಮಳೆಯಾಗಿದೆ.

ಕಳೆದ ಹಲವು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ಜನರು ಮನೆಯಿಂದ ಹೊರಬರಲು ಕಷ್ಟಪಡಬೇಕಿತ್ತು. ಆದರೆ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ನಗರದ ರಾಜಾಸೀಟು, ಗದ್ದುಗೆಯ ಪಾರ್ಕ್‌ಗಳಲ್ಲಿ ವಾಯುವಿವಾಹರಕ್ಕೆಂದು ಬಂದವರ ಸಂಖ್ಯೆ ಹೆಚ್ಚಾಗಿತ್ತು.

ಮಡಿಕೇರಿ ಸೇರಿದಂತೆ ಜಿಲ್ಲೆಯ ಭಾಗಮಂಡಲ, ತಲಕಾವೇರಿ, ಸಂಪಾಜೆ, ಶ್ರೀಮಂಗಲ, ಶಾಂತಳ್ಳಿ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿಯೂ ಕೂಡ ಮಳೆ ತಗ್ಗಿದ್ದು, ಹಳ್ಳಕೊಳ್ಳದಲ್ಲಿ ಉಕ್ಕಿ ಹರಿಯುತ್ತಿದ್ದ ನೀರಿನ ರಭಸ ಕೊಂಚ ಕಡಿಮೆಯಾಗಿದೆ.

ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಮಂಜು ಕವಿದ ವಾತಾವರಣವಿದೆ. ಈ ಮನೋಹರ ರಮಣೀಯ ದೃಶ್ಯಗಳನ್ನು ಸವಿಯಲು ಜಿಲ್ಲೆಯ ಮಾಂದಲ್ ಪಟ್ಟಿಯತ್ತ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. 

ಜಿಲ್ಲೆಯ ಮಳೆಯ ವಿವರ
ಗುರುವಾರ ಬೆಳಿಗ್ಗೆ 8 ಗಂಟೆ ಪೂರ್ಣಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ 37.69 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 11.09 ಮಿ.ಮೀ. ಮಳೆ ದಾಖಲಾಗಿತ್ತು.

ಜನವರಿಯಿಂದ ಇಲ್ಲಿಯವರೆಗೆ 654.69 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 411.24 ಮಿ.ಮೀ. ಮಳೆ ದಾಖಲಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ 60.30 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 940.69ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 538.77 ಮಿ.ಮೀ. ಮಳೆಯಾಗಿತ್ತು.

ವೀರಾಜಪೇಟೆ ತಾಲ್ಲೂಕಿನಲ್ಲಿ 34.27ಮಿ.ಮೀ. ಮಳೆ ಸುರಿದಿದೆ. ಜನವರಿಯಿಂದ ಇಲ್ಲಿಯವರೆಗೆ 497.30 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲಲಿ 350.16ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ 18.50 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 526.12 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 344.80ಮಿ.ಮೀ ಮಳೆಯಾಗಿತ್ತು.

ಹೋಬಳಿವಾರು ವಿವರ: ಮಡಿಕೇರಿ ಕಸಬಾ 33.80 ಮಿ.ಮೀ., ನಾಪೋಕ್ಲು 52.40 ಮಿ.ಮೀ., ಸಂಪಾಜೆ 59.60 ಮಿ.ಮೀ., ಭಾಗಮಂಡಲ 95.40 ಮಿ.ಮೀ., ವೀರಾಜಪೇಟೆ ಕಸಬಾ 31.40 ಮಿ.ಮೀ., ಹುದಿಕೇರಿ 31.00 ಮಿ.ಮೀ., ಶ್ರಿಮಂಗಲ 43.20 ಮಿ.ಮೀ., ಪೊನ್ನಂಪೇಟೆ 38.00 ಮಿ.ಮೀ., ಅಮ್ಮತ್ತಿ 47.00 ಮಿ.ಮೀ., ಬಾಳಲೆ 15.00 ಮಿ.ಮೀ., ಸೋಮವಾರಪೇಟೆ ಕಸಬಾ 21.80 ಮಿ.ಮೀ., ಶನಿವಾರಸಂತೆ 10.00 ಮಿ.ಮೀ., ಶಾಂತಳ್ಳಿ 40.00 ಮಿ.ಮೀ., ಕೊಡ್ಲಿಪೇಟೆ 11.00 ಮಿ.ಮೀ., ಕುಶಾಲನಗರ 9.60 ಮಿ.ಮೀ., ಸುಂಟಿಕೊಪ್ಪ 18.60 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2825.21 ಅಡಿಗಳು, ಕಳೆದ ವರ್ಷ ಇದೇ ದಿನ 2807.30 ಅಡಿ ನೀರಿತ್ತು.

ಹಾರಂಗಿಯ ಸುತ್ತಮುತ್ತಲ ಪ್ರದೇಶದಲ್ಲಿ 10.20 ಮಿ.ಮೀ. ಮಳೆ ಸುರಿದಿದೆ.  ಇಂದಿನ ನೀರಿನ ಒಳ ಹರಿವು 1320.00 ಕ್ಯೂಸೆಕ್ ಆಗಿದೆ. ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1448.00 ಕ್ಯೂಸೆಕ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.