ADVERTISEMENT

ತಿತಿಮತಿಗೆ ಏನಿದು ಗತಿ?

ರಸ್ತೆ ಅಗಲೀಕರಣ ವಿಳಂಬ, ನಿಸರ್ಗದ ಮಡಿಲೇ ಕೆಸರುಮಯ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 12:46 IST
Last Updated 19 ಜೂನ್ 2013, 12:46 IST

ಗೋಣಿಕೊಪ್ಪಲು: ಕೆಸರು ಗದ್ದೆಯಾದ ಕಾಲುದಾರಿ, ಮುಚ್ಚಿಹೋದ ಚರಂಡಿ, ಸೊಳ್ಳೆಗಳ ತವರಾದ ರಸ್ತೆಹೊಂಡ, ಎಲ್ಲೆಂದರಲ್ಲಿ ಕಸದ ರಾಶಿ, ಕೈಯಲ್ಲಿ ಜೀವ ಹಿಡಿದು ರಸ್ತೆಯಲ್ಲಿಯೇ ಸಂಚರಿಸುವ   ವಿದ್ಯಾರ್ಥಿಗಳು...

ಇವು ದಕ್ಷಿಣ ಕೊಡಗಿನ ಗಡಿ ಗ್ರಾಮ ತಿತಿಮತಿಯಲ್ಲಿ ಕಂಡುಬರುತ್ತಿರುವ ಸಮಸ್ಯೆಗಳು.

ಮೈಸೂರು, ಕಣ್ಣಾನೂರು ಮುಖ್ಯರಸ್ತೆಯಾದ ಈ ಮಾರ್ಗವನ್ನು ಅಗಲೀಕರಣಗೊಳಿಸುವುದಕ್ಕಾಗಿ ಚರಂಡಿಯನ್ನು ಕಿತ್ತು ಹಾಕಲಾಗಿದೆ. ರಸ್ತೆಬದಿಯ ಮಣ್ಣು ತೆಗೆದಿದ್ದು ಅದೆಲ್ಲ ಮಳೆಯಿಂದ ಕೆಸರು ಮಯವಾಗಿದೆ. ಡಾಂಬರ್ ಇರುವ ರಸ್ತೆಯಷ್ಟೇ ಉತ್ತಮವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಕೆಸರು ತುಂಬಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ದಟ್ಟ ವಾಹನ ಸಂಚಾರದ ನಡುವೆಯೇ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸಾರ್ವಜನಿಕರು ಅಪಾಯ ಲೆಕ್ಕಿಸದೆ ಸಂಚರಿಸುತ್ತಿದ್ದಾರೆ. ಜತೆಗೆ ಬೀದಿ ದನಗಳ ಕಾಟ ಬೇರೆ. ಬೈಕ್, ಕಾರು ಮತ್ತಿತರ ವಾಹನ ನಿಲುಗಡೆಗೂ ಸಮಸ್ಯೆಯಾಗಿದೆ. ಕಿರಿದಾದ ಮುಖ್ಯ ರಸ್ತೆಯಲ್ಲಿ ಅಪಘಾತಗಳು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿವೆ.

ಮತ್ತೊಂದು ಕಡೆ ಚರಂಡಿಯೇ ಇಲ್ಲದ್ದರಿಂದ ಹೋಟೆಲ್ ಹಾಗೂ ಮನೆಗಳ ತ್ಯಾಜ್ಯ ನೀರೆಲ್ಲ ರಸ್ತೆ ಬದಿಯಲ್ಲಿ ನಿಂತು ಸೊಳ್ಳೆಗಳ ಉಗಮ ತಾಣವಾಗಿದೆ. ರಸ್ತೆ ಬದಿಯಲ್ಲಿದ್ದ ಕಸದ ತೊಟ್ಟಿಯನ್ನು ತೆಗೆದು ಹಾಕಿರುವುದರಿಂದ ತ್ಯಾಜ್ಯವಸ್ತುಗಳೆಲ್ಲ ರಸ್ತೆಬದಿಯಲ್ಲಿಯೇ ಬಿದ್ದು ಕೊಳೆಯುತ್ತಿದೆ. ಇದರಿಂದ ಅರಣ್ಯದ ಅಂಚಿನಲ್ಲಿ ನಿಸರ್ಗದ ನಡುವೆ ಸ್ವಚ್ಛವಾಗಿದ್ದ ತಿತಿಮತಿ ಗ್ರಾಮ ಈಗ ಕಸದ ಕೊಂಪೆಯಾಗಿದೆ. ಸೋನೆ ಮಳೆ  ಕೊಳೆತ ಕಸದ ದುರ್ವಾಸನೆಗೆ ಮತ್ತಷ್ಟು ಇಂಬು ನೀಡಿದೆ. ಹೀಗಾಗಿ ಸ್ಥಳೀಯ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.

ಅಗಲೀಕರಣ ತಂದಿಟ್ಟ ಪಾಡು
ಹುಣಸೂರಿನಿಂದ ಅಗಲೀಕರಣಗೊಳ್ಳುತ್ತಿರುವ ಈ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದೇ  ಈ ಎಲ್ಲ ಸಮಸ್ಯೆಗೆ ಮೂಲ ಕಾರಣ. ಹುಣಸೂರು ರಸ್ತೆ ಜಂಕ್ಷನ್ ನಿಂದ 5 ಕಿ.ಮೀ.ವರೆಗೆ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಡೆ ರಸ್ತೆ ಬದಿಯ ಮಣ್ಣನ್ನಷ್ಟೆ ತೆಗೆಯಲಾಗಿದೆ. ಮಳೆಗಾಲ ಆರಂಭಗೊಂಡದ್ದರಿಂದ ಡಾಂಬರೀಕರಣ ಕಾರ್ಯ ನೆನಗುದಿಗೆ ಬಿದ್ದಿದೆ. ಇದರಿಂದ ಹೊಂಡ ಬಿದ್ದು ಹೈರಾಣಾಗಿರುವ ಆನೆ ಚೌಕೂರು ಪಂಚವಳ್ಳಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಮತ್ತಷ್ಟು ದುಸ್ತರವಾಗಿದೆ.

ಗೋಣಿಕೊಪ್ಪಲಿನಿಂದ ದೇವರಪುರವರೆಗೆ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ದೇವರಪುರದಿಂದ ತಿತಿಮತಿವರೆಗೆ ಕಾಮಗಾರಿಯ ಗುತ್ತಿಗೆ ಕೈಗೊಂಡಿರುವ ಕೃಷ್ಣಕುಮಾರ್ ಎಂಬವರ ನಿಧಾನಗತಿ ಕಾಮಗಾರಿ ಜನತೆಗೆ ತೀವ್ರ ತ್ರಾಸ ತಂದಿದೆ. ಮಳೆಗಾಲ ಆರಂಭವಾಗುವ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿದ್ದರೆ ಒಳ್ಳೆಯದಿತ್ತು. ಈಗ ಮಳೆಗಾಲ ಮುಗಿಯುವ ತನಕ ಕಾಯಬೇಕಾಗಿದೆ. ಅಲ್ಲಿಯವರೆಗೆ ತಿತಿಮತಿ ಗ್ರಾಮದ ಜನತೆಯ ಸಂಕಷ್ಟ ತಪ್ಪಿದ್ದಲ್ಲ ಎನ್ನುತ್ತಾರೆ ತಿತಿಮತಿ ನಿವಾಸಿ ಹಾಗೂ ಕಾಫಿ ಬೆಳೆಗಾರ ವಸಂತ.

ಈ ಬಗ್ಗೆ  ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಮೋಹನ್ ಅವರನ್ನು ಸಂಪರ್ಕಿಸಿದಾಗ, ಚರಂಡಿ ನಿರ್ಮಾಣದ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯ್ದ್ದದು. ಆದರೂ ಗ್ರಾಮಸ್ಥರ ಹಿತದೃಷ್ಟಿಯಿಂದ ಗ್ರಾಮ ಪಂಚಾಯಿತಿ ವತಿಯಿಂದಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.