ADVERTISEMENT

ದಲಿತರ ಭೂಮಿ ಅತಿಕ್ರಮಣ ತೆರವಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 8:19 IST
Last Updated 24 ಜೂನ್ 2013, 8:19 IST

ಸೋಮವಾರಪೇಟೆ: ತಾಲ್ಲೂಕಿನ ದಲಿತರ ಮೇಲಿನ ದೌರ್ಜನ್ಯ ಹಾಗೂ ಅವರ ಸಮಸ್ಯೆಗಳನ್ನು ಚರ್ಚಿಸಲು ತಹಶೀಲ್ದಾರ್ ವೆಂಕಟಾಚಲಯ್ಯ ಅಧ್ಯಕ್ಷತೆಯಲ್ಲಿ ಈಚೆಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆ ನಡೆಯಿತು. ದಲಿತ ಮುಖಂಡ ಜಯಪ್ಪ ಹಾನಗಲ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿಗಮದ ವ್ಯವಸ್ಥಾಪಕರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ, ಪ್ರಗತಿ ಪರಿಶೀಲನಾ ಸಭೆ ಸೇರಿದಂತೆ ಯಾವುದೇ ಸಭೆಗಳಿಗೆ ಹಾಜರಾಗುತ್ತಿಲ್ಲ ಎಂದು ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಜೆ.ಆರ್. ಪಾಲಾಕ್ಷ ಮಾತನಾಡಿ, ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 22 ದಲಿತ ಕುಟುಂಬಗಳು ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು. ತಾಲ್ಲೂಕಿನ 46 ಗ್ರಾಮಗಳ ಪೈಕಿ 26 ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಮೀಸಲಿರಿಸಿದ್ದರೂ ತಾಲ್ಲೂಕು ಆಡಳಿತ ಕ್ರಮಕ್ಕೆ ಮುಂದಾಗಿಲ್ಲ. ಮೂಲಕಡತಗಳು ತಾಲ್ಲೂಕು ಕಚೇರಿಯಲ್ಲಿ ದೊರೆಯುತ್ತಿಲ್ಲ. ಸಿಬ್ಬಂದಿ ವರ್ತನೆ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ನಡೆಯುವ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಇಲಾಖೆಯ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿದರು. ತಹಶೀಲ್ದಾರ್ ವೆಂಕಟಾಚಲಯ್ಯ ಮಾತನಾಡಿ, ಊರುಡುವೆ, ಪೈಸಾರಿ ಜಾಗವನ್ನು ಅತಿಕ್ರಮಿಸಿಕೊಂಡ ವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ದಲಿತರ ಭೂಮಿ, ಸ್ಮಶಾನ ಇನ್ನಿತರ ವಿಚಾರಗಳಿಗೆ ಸಂಬಂಧ ಲಿಖಿತ ದೂರು ನೀಡಬೇಕು. ಇದರಿಂದ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಬಿ. ಸೋಮಯ್ಯ, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಸಮಾಜ ಕಲ್ಯಾಣಾಧಿಕಾರಿ ನರಸಿಂಹಮೂರ್ತಿ, ವೃತ್ತ ನಿರೀಕ್ಷಕ ಸಿದ್ದಯ್ಯ, ರೈತ ಸಂಘದ ಡಿ.ಎಸ್.ನಿರ್ವಾಣಪ್ಪ, ದಲಿತ ಹಿತರಕ್ಷಣಾ ಒಕ್ಕೂಟದ ಎಚ್.ಬಿ. ಜಯಮ್ಮ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.