ADVERTISEMENT

‘ದುಡಿದು ತಿನ್ನಲು ಭೂಮಿ ಕೊಡಿ’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 7:23 IST
Last Updated 24 ಅಕ್ಟೋಬರ್ 2017, 7:23 IST

ಗೋಣಿಕೊಪ್ಪಲು: ‘ದುಡಿದು ತಿನ್ನಲು ಭೂಮಿ ಕೊಡಿ. ದೇವಸ್ಥಾನ, ಮಠ ಮಂದಿರ, ಮಸೀದಿ, ಚರ್ಚ್‌ಗಳು ಬೇಡ’ ಎಂಬ ಕೂಗಿನೊಂದಿಗೆ ಆದಿವಾಸಿ ಸಭಾ, ದಲಿತ ಸಂಘರ್ಷ ಸಮಿತಿ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷದಿಂದ ಸೋಮವಾರ ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕಚೇರಿ ಮುಂದೆ ಧರಣಿ ನಡಸಲಾಯಿತು.

ಪೊನ್ನಂಪೇಟೆ ಬಸ್‌ ನಿಲ್ದಾಣದಿಂದ ತಾಲ್ಲೂಕು ಪಂಚಾಯಿತಿ ಕಚೇರಿವರೆಗೆ ಮೆರವಣಿಗೆ ನಡೆಸಿದ ನೂರಾರು ನಿವೇಶನ ರಹಿತರು ಭೂಮಿ ನೀಡುವಂತೆ ಒತ್ತಾಯಿಸಿದರು. ‘ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಆದಿವಾಸಿಗಳ ಬದುಕು ಹಸನಾಗಿಲ್ಲ. ಅಧಿಕಾರಿಗಳು, ರಾಜಕಾರಣಿಗಳು ಬಡವರನ್ನು ತುಳಿಯುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಂದಿನ ಎರಡು ತಿಂಗಳ ಒಳಗೆ ನಿವೇಶನ ರಹಿತರಿಗೆ ಭೂಮಿ ಹಂಚಿಕೆ ಮಾಡದಿದ್ದರೆ ದಿಡ್ಡಳ್ಳಿ ಪ್ರತಿಭಟನೆಯ ಮಾದರಿಯಲ್ಲಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಆದಿವಾಸಿ ಭೂಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರಮೇಶ್ ಮಾಯಮುಡಿ ಎಚ್ಚರಿಸಿದರು.

ADVERTISEMENT

ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿ ಸಂಘಟನಾ ಸಂಚಾಲಕ ಸತೀಶ್ ಮಾತನಾಡಿ, ಶಿಕ್ಷಣ ಮತ್ತು ಮೂಲ ಸೌಕರ್ಯಗಳಿಂದ ವಂಚಿತರಾಗುತ್ತಿರುವ ಆದಿವಾಸಿಗಳಿಗೆ ಯಾವುದೇ ಸೌಕರ್ಯ ಲಭಿಸುತ್ತಿಲ್ಲ. ಆದಿವಾಸಿಗಳನ್ನು ನಿರಂತರವಾಗಿ ತುಳಿಯುವ ಯತ್ನ ನಡೆಯುತ್ತಿದೆ. ಇಂದಿಗೂ ಗಿರಿಜನರು ಲೈನ್ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ’ ಎಂದು ದೂರಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ‘ಪರಿಶಿಷ್ಟ ವರ್ಗದವರಿಗೆ ಮೂಲ ಸೌಕರ್ಯ ನೀಡುತ್ತಿಲ್ಲ. ತಮ್ಮ ಹಕ್ಕನ್ನು ಪಡೆಯುವ ಸ್ವಾತಂತ್ರ್ಯವೂ ಇಲ್ಲದಂತಾಗಿದೆ. ಸಂವಿಧಾನವನ್ನು ಅಂಬೇಡ್ಕರ್ ರಚನೆ ಮಾಡಿದರೂ ದಲಿತರಿಗೆ ಇಂದಿಗೂ ಮೂಲಸೌಕರ್ಯಗಳನ್ನು ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದು ಆರೋಪಿಸಿದರು.

ನಿವೇಶನ ರಹಿತರಿಗೆ ನಿವೇಶನ ಹಂಚಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಕಿರಣ್ ಪಡ್ನೇಕರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪಡ್ನೇಕರ್ ಮಾತನಾಡಿ, ‘ನಿವೇಶನ ರಹಿತರಿಗೆ ಭೂಮಿ ನೀಡಲು 90.60 ಎಕರೆ ಜಾಗವನ್ನು ಇರಿಸಲಾಗಿದೆ. ವಿರಾಜಪೇಟೆ ತಾಲ್ಲೂಕಿನ ಕೆದಂಬಳ್ಳೂರು, ಬಿರುನಾಣಿ, ಬೆಟೋಳ್ಳಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಗುಡ್ಡೆ ಹೊಸೂರು, ಹೆಬ್ಬಾಲೆ ಮತ್ತು ಬೇಡಗೊಟ್ಟ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭೂಮಿ ಕಾಯ್ದಿರಿಸಲಾಗಿದೆ. ನಿವೇಶನಕ್ಕಾಗಿ 721 ಅರ್ಜಿಗಳು ಬಂದಿವೆ. ಶೀಘ್ರ ನಿವೇಶನ ಹಂಚಿಕೆ ಕಾರ್ಯ ನಡೆಯಲಿದೆ’ ಎಂದರು.

ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುನಿಲ್, ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಕೃಷ್ಣಪ್ಪ, ರಜಿನಿಕಾಂತ್, ತಾಲ್ಲೂಕು ಕಟ್ಟಡ ಕಾರ್ಮಿಕ ಸಂಘಟನಾ ಸಂಚಾಲಕ ಮೋಹನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.