ADVERTISEMENT

ದೇವರಕಾಡು ಅತಿಕ್ರಮಣ; ರೆಸಾರ್ಟ್ ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 6:05 IST
Last Updated 11 ಜೂನ್ 2011, 6:05 IST

ಮಡಿಕೇರಿ: ನೆಲಜಿ ಗ್ರಾಮದ ಮಲ್ಮ ಬೆಟ್ಟದಲ್ಲಿ ರೆಸಾರ್ಟ್, ಹೆಲಿಪ್ಯಾಡ್ ನಿರ್ಮಾಣ ಸೇರಿದಂತೆ ದೇವ ನೆಲೆಯ ಪಾವಿತ್ರ್ಯತೆಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡು ವುದಿಲ್ಲ ಎಂದು ಗ್ರಾಮದ ನಾಗರಿಕ ಹಿತ ರಕ್ಷಣಾ ಹೋರಾಟ ಸಮಿತಿ ಎಚ್ಚರಿಸಿದೆ. ಮಲ್ಮ ಬೆಟ್ಟದಲ್ಲಿ ರಕ್ಷಿತಾರಣ್ಯ ಮತ್ತು ದೇವರ ಕಾಡಿನ ಜಾಗ ಅತಿಕ್ರಮಣ ವಾಗಿದೆ ಎಂದು ಸಮಿತಿಯ ಪದಾಧಿ ಕಾರಿಗಳು ಆರೋಪಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಎಂ.ಎ.ಅಯ್ಯಪ್ಪ, ಅಧ್ಯಕ್ಷ ಎಂ.ಕೆ.ನಂಜಪ್ಪ ಮತ್ತು ಗ್ರಾಮದ ತಕ್ಕ ಮುಖ್ಯಸ್ಥ ಬಿ. ನಾಣಯ್ಯ ಮಲ್ಮ ಬೆಟ್ಟದಲ್ಲಿ ರೆಸಾರ್ಟ್ ನಿರ್ಮಾಣ ಮಾಡುವುದನ್ನು ತೀವ್ರವಾಗಿ ವಿರೋಧಿಸಿದರು. 

ಮಲ್ಮ ಬೆಟ್ಟ ಶ್ರೀ ಇಗ್ಗುತಪ್ಪ ದೇವರ ಆದಿ ಸ್ಥಾನವಾಗಿದೆ. ಇಲ್ಲಿ ಸುಮಾರು 350 ಎಕರೆಯಷ್ಟು ದೇವರಕಾಡು ಇದೆ. ಪಾವಿತ್ರತೆಗೆ ಹೆಸರಾಗಿರುವ ಈ ಬೆಟ್ಟವನ್ನು ಕಡಿದು ರಸ್ತೆ ನಿರ್ಮಾಣ ಕಾರ್ಯ ನಡೆದಿದೆ. ಹೆಲಿಪ್ಯಾಡ್ ಮತ್ತು ಹರಿಯುವ ನೀರಿಗೆ ತಡೆಗೋಡೆ ನಿರ್ಮಿಸುವ ಪ್ರಯತ್ನವೂ ನಡೆದಿದೆ. ಇದಕ್ಕೆ ಗ್ರಾಮಸ್ಥರು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಪರಿಸರಕ್ಕೆ ಹಾನಿ ಮಾಡುವ ಯೋಜನೆಗಳ ವಿರುದ್ಧ ಗ್ರಾಮಸ್ಥರು ಪಕ್ಷಾತೀತವಾಗಿ ಹೋರಾಟ ನಡೆಸ ಲಿದ್ದಾರೆ. ಸ್ವಂತ ಜಮೀನಿನಲ್ಲಿಯೂ ಕೂಡ ಪರಿಸರ ವಿರೋಧಿ ಚಟು ವಟಿಕೆಗಳಿಗೆ ಅವಕಾಶ ನೀಡುವುದಿಲ್ಲ.

ರೆಸಾರ್ಟ್ ನಿರ್ಮಾಣದಿಂದ ಅರಣ್ಯ ಪ್ರದೇಶದ ಹಲವು ಮರಗಳು ಹನನ ವಾಗಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ. ಈ ಭಾಗದಲ್ಲಿ ಗಣಿಗಾರಿಕೆ ನಡೆಯುವ ಸಾಧ್ಯತೆಯೂ ಇದ್ದು ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದರು. ರೆಸಾರ್ಟ್ ನಿರ್ಮಾ ಣಕ್ಕೆ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅನುಮತಿ ನೀಡಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಎಂ.ಎಂ.ಅಪ್ಪಚ್ಚ ಮತ್ತು ಕಾರ್ಯದರ್ಶಿ ಎಂ.ಎಂ.ವಿನಯ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.