ADVERTISEMENT

ಧಾರಾಕಾರ ಮಳೆಗೆ ಮನೆ ಕುಸಿತ; ಪರಿಹಾರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2011, 9:35 IST
Last Updated 29 ಜೂನ್ 2011, 9:35 IST
ಧಾರಾಕಾರ ಮಳೆಗೆ ಮನೆ ಕುಸಿತ; ಪರಿಹಾರ
ಧಾರಾಕಾರ ಮಳೆಗೆ ಮನೆ ಕುಸಿತ; ಪರಿಹಾರ   

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಸುರಿ ಯುತ್ತಿರುವ ಧಾರಾಕಾರ ಮಳೆಗೆ ಮೇಕೇರಿ ಬಳಿಯ ತಮಿಳ ರಾಜು ಎಂಬುವರ ಮನೆ ಹಿಂಬದಿಯಲ್ಲಿ ಬರೆಕುಸಿದು ಹಾನಿಯಾಗಿದ್ದ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಟಿ.ಜಾನ್ ಅವರು ರಾಜು ಕುಟುಂಬಕ್ಕೆ ವೈಯಕ್ತಿಕವಾಗಿ ನಾಲ್ಕು ಸಾವಿರ ರೂಪಾಯಿ  ಧನಸಹಾಯ ನೀಡಿದರು.

ಬರೆ ಕುಸಿತದಿಂದ ತಮಿಳರ ರಾಜು ಅವರ ಹಿಂಬದಿಯ ಮನೆ ಕುಸಿದು ಹಾನಿಯಾಗಿದ್ದು. ಇದರ ದುರಸ್ತಿಗೆ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಮಳೆಯಿಂದ ಅಲ್ಲಲ್ಲಿ ಬರೆ ಕುಸಿತ, ಪ್ರವಾಹ ಉಂಟಾ ಗುವ ಸಂಭವವಿದೆ. ಇಂತಹ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಖುದ್ದಾಗಿ ಭೇಟಿ ನೀಡಿ ಮುಂಜಾಗ್ರತಾ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸ ಬೇಕು. ಜೊತೆಗೆ ಬರೆ ಕುಸಿತ ಹಾಗೂ ಪ್ರವಾಹದಿಂದ ಸಂಭವಿಸುವ ಹಾನಿಗೆ ತಕ್ಷಣವೇ ಪರಿಹಾರ ಬಿಡುಗಡೆ ಮಾಡಲು ಕ್ರಮವಹಿಸಬೇಕು ಎಂದು ಟಿ. ಜಾನ್ ಸಲಹೆ ಮಾಡಿದರು.

ಪ್ರವಾಹ, ಬರೆ ಕುಸಿತ ಮತ್ತಿತರ ಅತಿವೃಷ್ಠಿ ಸಂಭವಿಸಿ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡುವ ಕೆಲಸವನ್ನು ಅಧಿಕಾರಿಗಳು ತುರ್ತಾಗಿ ಮಾಡಬೇಕು ಎಂದು ಟಿ. ಜಾನ್ ಹೇಳಿದರು.

ಕೊಡಗು ಜಿಲ್ಲಾ ಘಟಕದ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ ಪ್ರದೀಪ್ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚು ಮಳೆ ಯಾಗುವುದರಿಂದ ಪ್ರವಾಹ, ಬರೆ ಕುಸಿತ ಅಲ್ಲಲ್ಲಿ ಉಂಟಾಗುವ ಸಂಭವ ಹೆಚ್ಚಿದೆ. ಇಂತಹ ಸಂದರ್ಭ ದಲ್ಲಿ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕೆಂದರು. 

ಹಾಕತ್ತೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಜಿ. ಶರೀನ್ ಅವರು ಮಾತನಾಡಿದರು. ಮಾಜಿ ಸಚಿವರಾದ ಎಂ.ಎಂ. ನಾಣಯ್ಯ, ಮೂಡ ಮಾಜಿ ಅಧ್ಯಕ್ಷರಾದ ಬಿ.ಕೃಷ,್ಣ ಹಾಕತ್ತೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ದಾಮೋದರ್, ಹನೀಫ್, ಜಗದೀಶ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಮತ್ತಿತರರು ಇದ್ದರು.

ಇದೇ ಸಂದರ್ಭದಲ್ಲಿ ಹಾಕತ್ತೂರು ಗ್ರಾಮ ಪಂಚಾಯಿತಿಯಿಂದ ಪರಿಹಾರ ನಿಧಿ ಯೋಜನೆಯಡಿ ತಮಿಳ ರಾಜು ಅವರಿಗೆ ಒಂದು ಸಾವಿರ ರೂಪಾಯಿ ಪರಿಹಾರ ನೀಡಲಾಯಿತು.     

ಹಾಕತ್ತೂರು ಗ್ರಾ.ಪಂ.ಗೆ ಟಿ.ಜಾನ್ ಭೇಟಿ: ವಿಧಾನ ಪರಿಷತ್ ಸದಸ್ಯ ಟಿ. ಜಾನ್ ಅವರು ಹಾಕತ್ತೂರು ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಗ್ರಾ.ಪಂ.ನಲ್ಲಿ ಎಷ್ಟು ಕ್ರಿಯಾ ಯೋಜನೆ ಮಾಡಲಾಗಿದೆ, ಅನುಮೋದನೆ ದೊರೆತಿರುವುದು ಎಷ್ಟು ಎಂಬ ಬಗ್ಗೆ ಹಾಕತ್ತೂರು ಗ್ರಾ.ಪಂ. ಅಧ್ಯಕ್ಷರು ಮತ್ತು ಪಿಡಿಓ ಅವರಿಂದ ಮಾಹಿತಿ ಪಡೆದರು.

ನಂತರ ಜಿ.ಪಂ. ಮುಖ್ಯ ಕಾರ್ಯನಿರ್ವಹ ಣಾ ಧಿಕಾರಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಡಿ ಹೆಚ್ಚಿನ ಹಣ ಬಿಡುಗಡೆ ಮಾಡಲು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.

ಹಾಕತ್ತೂರು ಗ್ರಾ.ಪಂ. ಅಧ್ಯಕ್ಷರಾದ ಶರೀನ್ ಅವರು 1.99 ಕೋಟಿಗೆ ಕ್ರಿಯಾ ಯೋಜನೆ ಮಾಡಿ ಕಳುಹಿಸಿಕೊಡಲಾಗಿತ್ತು. ಈಗ 41 ಲಕ್ಷ ರೂ.ಗೆ ಅನುಮೋದನೆ ದೊರೆತಿದೆ ಎಂದರು. 

ಗ್ರಾ.ಪಂ. ಸದಸ್ಯರಾದ ಹನೀಪ್ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಬೇಕೆಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.