
ಗೋಣಿಕೊಪ್ಪಲು: ದಕ್ಷಿಣ ಕೊಡಗಿ ನಾದ್ಯಂತ ಕಳೆದ ಮೂರು ದಿನಗಳಿಂದ ಸುರಿದ ಮಳೆಯ ರಭಸ ಮಂಗಳವಾರ ತುಸು ಕಡಿಮೆಯಾಗಿತ್ತು. ಆದರೂ ಆಗಾಗ ಬೀಸುತ್ತಿದ್ದ ಬಿರುಗಾಳಿಯೊಂದಿಗೆ ಮಳೆ ನಿರಂತರವಾಗಿತ್ತು.
ಮಂಗಳವಾರವೂ ಕೂಡ ರಸ್ತೆ ಬದಿಯ ಕಾಫಿ ತೋಟದ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಮತ್ತಷ್ಟು ಹಾನಿ ಮಾಡಿದವು. ಗೋಣಿ ಕೊಪ್ಪಲು ಮಾಯಮುಡಿ ನಡುವಿನ ಬಾಳಾಜಿ ಮುಖ್ಯರಸ್ತೆಯಲ್ಲಿ ಸಿಲ್ವರ್ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ಕಂಬ ಮುರಿದು ರಸ್ತೆಗೆ ಬಿದ್ದಿತ್ತು. ಇದರ ತಂತಿಯನ್ನು ಕಡಿತಗೊಳಿಸಿ ಕಂಬವನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಆರಂಭಗೊಂಡಿತು.
ಗೋಣಿಕೊಪ್ಪಲು– ವಿರಾಜಪೇಟೆ ಮುಖ್ಯರಸ್ತೆಯಲ್ಲಿಯ ನಯನ ಚಿತ್ರ ಮಂದಿರದ ಬಳಿ ಭಾರಿ ಗಾತ್ರದ ಮರ ಉರುಳಿ, ವಿದ್ಯುತ್ ಕಂಬ ಮುರಿದು ಬಿದ್ದಿತ್ತು. ಕೂಡಲೇ ಸೆಸ್ಕ್ ಸಹಾಯಕ ಎಂಜಿನಿಯರ್ ಕೃಷ್ಣಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಸ್ತೆಗೆ ಬಿದ್ದಿದ್ದ ಮರವನ್ನು ಕಡಿದು ತೆರವುಗೊಳಿಸಿದರು.
ಮುರಿದು ಬಿದ್ದ ವಿದ್ಯುತ್ ಕಂಬ ಬದಲಾಯಿಸಿ ತುಂಡಾಗಿದ್ದ ತಂತಿಗಳನ್ನು ತೆಗೆದು, ಹೊಸ ತಂತಿಗಳನ್ನು ಜೋಡಿಸಿದರು.
ಪೊನ್ನಂಪೇಟೆ ಗೋಣಿ ಕೊಪ್ಪಲು ನಡುವಿನ ಅರವತ್ತೊಕ್ಕಲು ಬಳಿ ಹತ್ತಾರು ಮರದ ರೆಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ಈ ಮಾರ್ಗದ ಎಲ್ಲ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಗೋಣಿಕೊಪ್ಪಲು– ಬಾಳೆಲೆ ನಡುವಿನ 20 ಕಿ.ಮೀ ದೂರದ ರಸ್ತೆ ಬದಿಯ ವಿದ್ಯುತ್ ಕಂಬಗಳು ಕೂಡ ನೆಲಕ್ಕುರುಳಿವೆ.
ಈ ಮಾರ್ಗದ ವಿದ್ಯುತ್ ಕಂಬಗಳನ್ನು ಹೊಸದಾಗಿಯೇ ನಿರ್ಮಿಸಬೇಕಿದೆ ಎಂದು ಸೆಸ್ಕ್ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅಂಕಯ್ಯ ತಿಳಿಸಿದರು. ಹುದಿಕೇರಿ, ಪೊನ್ನಂಪೇಟೆ, ಕಿರುಗೂರು, ನಲ್ಲೂರು, ಪೊನ್ನಪ್ಪಸಂತೆ, ಕುಂದ, ಬಿ. ಶೆಟ್ಟಿಗೇರಿ, ಮೊದಲಾದ ಭಾಗಗಳಲ್ಲಿಯೂ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅಂಕಯ್ಯ ದಕ್ಷಿಣ ಕೊಡಗಿನಾದ್ಯಂತ ಸುಮಾರು 500 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹೊಸ ಕಂಬಗಳನ್ನು ಆಂಧ್ರ ಪ್ರದೇಶದಿಂದ ತರಿಸಬೇಕಾಗಿದೆ. ಸುರಿಯುತ್ತಿರುವ ಮಳೆ ಹಾಗೂ ಬಿರುಗಾಳಿಯಿಂದಾಗಿ ನಿತ್ಯವೂ ಹತ್ತಾರು ಮರಗಳು ಮುರಿದು ವಿದ್ಯುತ್ ಮಾರ್ಗದ ಮೇಲೆ ಬೀಳುತ್ತಲೇ ಇವೆ. ಹೀಗಾಗಿ ವಿದ್ಯುತ್ ಮಾರ್ಗವನ್ನು ಸರಿಪಡಿಸುವ ಕಾರ್ಯಕ್ಕೆ ಧಕ್ಕೆಯಾಗಿದೆ ಎಂದರು.
ಆದರೂ, ಗೋಣಿಕೊಪ್ಪಲು–ಪೊನ್ನಂ ಪೇಟೆ ಪಟ್ಟಣಗಳಿಗಾದರೂ ವಿದ್ಯುತ್ ಸಂಪರ್ಕ ಕಲ್ಪಿಸಲು ಶ್ರಮಿಸಲಾಗುತ್ತಿದೆ. ದಕ್ಷಿಣ ಕೊಡಗಿಗೆ ಸಂಪರ್ಕ ಕಲ್ಪಿಸಿರುವ ಮೈಸೂರು– ಹುಣಸೂರು– ಪೊನ್ನಂ ಪೇಟೆಯ 66 ಸಾವಿರ ಕೆವಿ ವಿದ್ಯುತ್ ಮಾರ್ಗದಲ್ಲಿ ನಾಗರಹೊಳೆ ಅರಣ್ಯ ದೊಳಗೆ ಉಂಟಾಗಿರುವ ದೋಷವನ್ನು 3 ದಿನಗಳಿಂದ 30 ಜನರ ತಂಡ ಕಾರ್ಯ ನಿರ್ವಹಿಸುತ್ತಿದೆ.
ಇದು ದುರಸ್ತಿಗೊಂಡ ಕೂಡಲೇ ಪಟ್ಟಣ ಪ್ರದೇಶಗಳಿಗಾದರೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.
ಕಳೆದ 4 ದಿನಗಳಿಂದ ದಕ್ಷಿಣ ಕೊಡಗಿನಾದ್ಯಂತ ವಿದ್ಯುತ್ ಇಲ್ಲದಿರು ವುದರಿಂದ ಮಂಗಳವಾರ ಗೋಣಿ ಕೊಪ್ಪಲು– ಪೊನ್ನಂಪೇಟೆಗಳಲ್ಲಿ ಬಹ ಳಷ್ಟು ಅಂಗಡಿ ಮುಂಗಟ್ಟುಗಳು ಮುಚ್ಚಿ ಒಂದು ರೀತಿಯಲ್ಲಿ ಅಘೋಷಿತ ಬಂದ್‌ನಂತೆ ಕಂಡು ಬಂದಿತು. ಎಟಿಎಂ ಕೂಡ ಕಾರ್ಯನಿರ್ವಹಿಸುತ್ತಿಲ್ಲ.
ಬಹಳಷ್ಟು ಖಾಸಗಿ ವೈದ್ಯಕೀಯ ಕ್ಲಿನಿಕ್‌ಗಳು ಕೂಡ ಮುಚ್ಚಿದ್ದವು. ಮೊಬೈಲ್ ಬಳಕೆದಾರರು ಚಾರ್ಜ್ ಮಾಡಿಕೊಳ್ಳಲು ಜನರೇಟರ್ ಇರುವ ಹೋಟೆಲ್‌ಗಳಿಗೆ ಎಡತಾಕುತ್ತಿರುವುದು ಕಂಡು ಬಂತು. ಬಾಳೆಲೆ– ನಿಟ್ಟೂರು ನಡುವಿನ ಲಕ್ಷ್ಮಣತೀರ್ಥ ನದಿ ಪ್ರವಾಹ ಹೆಚ್ಚಾಗಿದ್ದು ಎರಡು ದಿನಗಳಿಂದ ಈ ಭಾಗದ ರಸ್ತೆ ಸಂಪರ್ಕ ಕಡಿದುಹೋಗಿದೆ.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಚ್. ಕುಶಾಲಪ್ಪ ಹಾಗೂ ಬಾಂಡ್ ಗಣಪತಿ ಮಂಗಳವಾರ ಗೋಣಿ ಕೊಪ್ಪಲಿನ ಸೆಸ್ಕ್ ಕಚೇರಿಗೆ ಭೇಟಿ ನೀಡಿ ವಿದ್ಯುತ್ ಸಮಸ್ಯೆ ಬಗ್ಗೆ ಅಂಕಯ್ಯ ಅವರೊಂದಿಗೆ ಚರ್ಚಿಸಿದರು.
ನಾಗರಹೊಳೆ ಅರಣ್ಯದೊಳಗೆ ವಿದ್ಯುತ್ ಮಾರ್ಗ ದುರಸ್ತಿಗೊಂಡ ಕೂಡಲೇ ಪಟ್ಟಣ ಪ್ರದೇಶಗಳಿಗಾದರೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.- ಅಂಕಯ್ಯ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸೆಸ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.