ADVERTISEMENT

ನೀರಿನ ಸಮಸ್ಯೆ: ರಸ್ತೆ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 9:40 IST
Last Updated 7 ಮಾರ್ಚ್ 2014, 9:40 IST

ಕುಶಾಲನಗರ: ಪಟ್ಟಣದ ವಿವೇಕಾನಂದ ಮತ್ತು ಕಾಳಮ್ಮ ಬಡಾವಣೆಗಳಿಗೆ ಕೆಆರ್‌ಡಿಸಿಎಲ್ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಗುರುವಾರ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಮೋದ್ ಮುತ್ತಪ್ಪ ಮತ್ತು ಎಚ್‌.ಜೆ. ಕರಿಯಪ್ಪ ಅವರ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಕಾಳಮ್ಮ ಬಡಾವಣೆಯ ಹಿಂಭಾಗದಲ್ಲಿ ಹಾದುಹೋಗಿರುವ ಕೊಣನೂರು ಮಾಕುಟ್ಟ ರಾಜ್ಯ ಹೆದ್ದಾರಿ ಕಾಮಗಾರಿಗೆ ತಡೆಯೊಡ್ಡಿದ ಇಲ್ಲಿನ ನಿವಾಸಿಗಳು 10 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ, ಕೆಆರ್‌ಡಿಸಿಎಲ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ನೀರಿನ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸದಿದ್ದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ನಡೆಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಸ್ಥಳದಲ್ಲೇ ಇದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ಕುಡಿಯುವ ನೀರಿನ ಪೈಪುಗಳನ್ನು ಮತ್ತು ಕಡಿತಗೊಂಡಿರುವ ವಿದ್ಯುತ್ ಸಂಪರ್ಕವನ್ನು ಸರಿಪಡಿಸಿಕೊಡುವಂತೆ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ಮೂರು ತಿಂಗಳ ಹಿಂದೆಯೇ ರಸ್ತೆ ವಿಸ್ತರಣೆ ವೇಳೆ ಕುಡಿಯುವ ನೀರಿನ ಪೈಪುಗಳನ್ನು ಕೆಆರ್‌ಡಿಸಿಎಲ್‌ನಿಂದ ಕಡಿತ ಮಾಡಲಾಯಿತು. ಅಂದಿನಿಂದ ಇದೂವರೆಗೆ ಅವುಗಳನ್ನು ಸರಪಡಿಸುವ ಕೆಲಸಕ್ಕೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿಲ್ಲ. ತಕ್ಷಣವೇ ಇದನ್ನು ಸರಿಪಡಿಸದೇ ಇದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುತ್ತದೆ ಎಂದರು.

ಸ್ಥಳೀಯ ನಿವಾಸಿ ಎಚ್.ಟಿ. ರವಿ ಮಾತನಾಡಿ, ಕುಡಿಯುವ ನೀರಿನ ಪೈಪುಗಳು ತುಂಡಾಗಿರುವ ಬಗ್ಗೆ ನಗರಾಭಿವೃದ್ಧಿ ಮತ್ತು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಇಲಾಖೆಯ ಎಂಜಿನಿಯರ್ ಒಮ್ಮೆಯೂ ಇತ್ತ ಕಡೆ ಗಮನ ಹರಿಸಿಲ್ಲ ಎಂದು ದೂರಿದರು.

ಪಟ್ಟಣ ಪಂಚಾಯಿತಿ ಸದಸ್ಯ ಎಚ್.ಜೆ. ಕರಿಯಪ್ಪ, ಕಾಂಗ್ರೆಸ್‌ ಯುವ ಘಟಕದ ಮುಖಂಡ ಶಿವಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.