ADVERTISEMENT

ನೀರು ಶುದ್ಧೀಕರಣ ಘಟಕ; ಅವ್ಯವಸ್ಥೆಯ ಆಗರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 7:54 IST
Last Updated 17 ಸೆಪ್ಟೆಂಬರ್ 2013, 7:54 IST
ಸೋಮವಾರಪೇಟೆ ನಗರಕ್ಕೆ ಸರಬರಾಜಾಗುವ ಕುಡಿಯುವ ನೀರಿನ ತೊಟ್ಟಿಗೆ ಭದ್ರತೆಯಿಲ್ಲದಿರುವುದು.
ಸೋಮವಾರಪೇಟೆ ನಗರಕ್ಕೆ ಸರಬರಾಜಾಗುವ ಕುಡಿಯುವ ನೀರಿನ ತೊಟ್ಟಿಗೆ ಭದ್ರತೆಯಿಲ್ಲದಿರುವುದು.   

ಸೋಮವಾರಪೇಟೆ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಶುದ್ಧೀಕರಣ ಕೇಂದ್ರಕ್ಕೆ ಭದ್ರತೆಯೇ ಇಲ್ಲದಂತಾಗಿದ್ದು, ಅಪಾಯದ ಅಂಚಿನಲ್ಲಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ.

ನಗರದಲ್ಲಿ  8 ಸಾವಿರ ಜನಸಂಖ್ಯೆಯಿದ್ದು, ಇದೇ ಶುದ್ಧೀಕರಣ ಕೇಂದ್ರದಿಂದ ಅಷ್ಟೂ ಜನಕ್ಕೂ ಕುಡಿಯುವ ನೀರು ಸರಬರಾಜಾಗುತ್ತಿದೆ. ಘಟಕದ ಸುತ್ತಲೂ ಹಲವು ಬಾರಿ ತಂತಿಬೇಲಿ ಹಾಕಿಸಿದ್ದರೂ, ಪಟಾಕಿ ವರ್ತಕರಿಗೆ ಸ್ಥಳವನ್ನು ನೀಡಿದ್ದರಿಂದ ಬೇಲಿ ಕಿತ್ತು ಹಾಕಲಾಗಿದೆ. ಈವರೆಗೂ ಸರಿಪಡಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಈ ಸ್ಥಳ ಬಿಡಾಡಿ ದನಗಳ ಆಶ್ರಯತಾಣವಾಗಿ ಮಾರ್ಪಟ್ಟಿದೆ. ನೀರು ಸಂಗ್ರಹದ ನೆಲ ಅಂತಸ್ತಿನಲ್ಲಿ ಬೃಹತ್ ಟ್ಯಾಂಕರ್‌ಗಳಿದ್ದು, ಸುತ್ತಲೂ ತಡೆಗೋಡೆ ಅಥವಾ ತಂತಿ ಬೇಲಿ ನಿರ್ಮಿಸಿಲ್ಲ.

ನೀರು ಶುದ್ಧೀಕರಣ ಕೇಂದ್ರದ ಇಕ್ಕೆಲಗಳಲ್ಲಿ ರಾತ್ರಿ ವೇಳೆ ಖಾಸಗಿ ಬಸ್‌ ಹಾಗೂ ಇತರೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ರಾತ್ರಿ­ಯಾದರೆ ಯಾರು ಬೇಕಾದರೂ ಒಳ ಪ್ರವೇಶಿಸಬಹುದು. ದಾರಿಹೋಕರು ಇಲ್ಲಿ ಮಲಮೂತ್ರ ವಿಸರ್ಜನೆಗೆ ಈ ಸ್ಥಳವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.   ನೀರಿನ ತೊಟ್ಟಿ ತೆರೆದಿರುವುದರಿಂದ ನಾಯಿ, ಹೆಗ್ಗಣ, ಇಲಿ, ಕಾಗೆ ಸೇರಿದಂತೆ ಇನ್ನಿತರ ಪ್ರಾಣಿ ಪಕ್ಷಿಗಳು ಸತ್ತು ನೀರಿನ ಟ್ಯಾಂಕ್ ಒಳಗೆ ಬಿದ್ದರೂ, ಯಾರ ಗಮನಕ್ಕೂ ಬರುವುದಿಲ್ಲ.

ಕೆಲ ತಿಂಗಳ ಹಿಂದೆ, ನೀರಿನ ಟ್ಯಾಂಕ್‌ವೊಂದರಲ್ಲಿ ಹೆಗ್ಗಣ ಸತ್ತು ಬಿದ್ದು, ಕೊಳೆತು ನಾರುತ್ತಿದ್ದ ಸಂದರ್ಭ, ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಗಮನಿಸಿ ಪಂಚಾಯಿತಿ ಆಡಳಿತದ ಗಮನಕ್ಕೆ ತಂದಿದ್ದರು. ಆದರೆ ಇಲ್ಲಿಯವರೆಗೂ  ನೀರು ಶುದ್ಧೀಕರಣ ಕೇಂದ್ರಕ್ಕೆ ಸೂಕ್ತ ಭದ್ರತೆ ಕಲ್ಪಿಸಿಲ್ಲ. ಕೂಡಲೇ ನೂತನ ಆಡಳಿತ ಮಂಡಳಿಯವರು ಎಚ್ಚೆತ್ತುಕೊಂಡು ನೀರು ಶುದ್ಧೀಕರಣ ಘಟಕದ ಭದ್ರತೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.