ಶನಿವಾರಸಂತೆ: ಆಲೂರು ಸಿದ್ಧಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೂರು ಗ್ರಾಮಕ್ಕೆ ಕಳೆದ ಒಂದು ವಾರದಿಂದ ಕುಡಿಯುವ ನೀರು ಸರಬರಾಜು ಮಾಡದಿರುವುದನ್ನು ಖಂಡಿಸಿ ಗ್ರಾಮಸ್ಥರು ಮಂಗಳವಾರ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ನಡೆದಿದೆ. ಗ್ರಾಮದ ಮುತ್ತಣ್ಣ, ಜಯಪ್ರಕಾಶ್, ಬೋಪಯ್ಯ ಮತ್ತಿತರ ಪ್ರಮುಖರ ನೇತೃತ್ವದಲ್ಲಿ ಗ್ರಾಮ ಸ್ಥರು ಪಂಚಾಯಿತಿ ಕಾರ್ಯದರ್ಶಿ ಹಾಗೂ ಸಿಬ್ಬಂದಿಯನ್ನು ಕಚೇರಿಯಿಂದ ಹೊರಗೆ ಕರೆಸಿ ಬಾಗಿಲು ಮುಚ್ಚಿ ಬೀಗ ಜಡಿದರು.
2 ಗಂಟೆ ಕಾಲ ಪಂಚಾಯಿತಿ ಸಿಬ್ಬಂದಿ ಕಚೇರಿಯ ಹೊರಗಡೆ ಇರಬೇಕಾಯಿತು. ನಂತರ ಬಂದ ಪಿ.ಡಿ.ಓ.ಸಂತೋಷ್ ಅವರನ್ನೂ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಕೆಟ್ಟುಹೋಗಿರುವ ಮೋಟಾರ್ ಅನ್ನು ದುರಸ್ತಿಗೊಳಿಸಲು ಫಿಟ್ಟರ್ ಬಳಿ ಕಳುಹಿಸಲಾಗಿದೆ. ಆದರೆ, ಅವರ ಅನಾರೋಗ್ಯದಿಂದ ಮೋಟಾರ್ ದುರಸ್ತಿಗೊಳಿಸಲು ಸಾಧ್ಯವಾಗಲಿಲ್ಲ ಎಂದು ಪಿ.ಡಿ.ಓ.ಹೇಳಿದಾಗ, ಬೇರೆ ಫಿಟ್ಟರ್ ಬಳಿ ಹೋಗಿ ಮೋಟಾರ್ ದುರಸ್ತಿ ಪಡಿಸುವುದು ಗ್ರಾಮ ಪಂಚಾಯಿತಿಯ ಹೊಣೆ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಕೊನೆಗೆ ವಿಧಿಯಿಲ್ಲದೇ ಬೇರೆ ಫಿಟ್ಟರ್ ಬಳಿ ತೆರಳಿ ಮೋಟಾರನ್ನು ದುರಸ್ತಿಪಡಿಸಿಕೊಡಲಾಯಿತು. ನಂತರ ಪ್ರತಿಭಟನೆ ಹಿಂತೆಗೆದುಕೊಂಡ ಗ್ರಾಮಸ್ಥರು ಕಚೇರಿ ಬಾಗಿಲಿನ ಬೀಗ ತೆಗೆದು ತೆರವುಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.