ADVERTISEMENT

ನೆಮ್ಮದಿ ಕೇಂದ್ರದಲ್ಲಿ ಅನಗತ್ಯ ವಿಳಂಬ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 9:41 IST
Last Updated 7 ಮಾರ್ಚ್ 2014, 9:41 IST

ಕುಶಾಲನಗರ: ಪಟ್ಟಣದ ನಾಡಕಚೇರಿ ಬಳಿಯಿರುವ ನೆಮ್ಮದಿ ಕೇಂದ್ರದಲ್ಲಿ ವಿವಿಧ ದೃಢೀಕರಣ ಪತ್ರಗಳಿಗೆ ಅರ್ಜಿ ಪಡೆಯಲು ಅನಗತ್ಯವಾಗಿ  ವಿಳಂಬ ಮಾಡಲಾಗುತ್ತಿದೆ ಎಂದು ಇಲ್ಲಿನ ಸಿಬ್ಬಂದಿಯನ್ನು ಸಾರ್ವಜನಿಕರು ಗುರುವಾರ ತರಾಟೆಗೆ ತೆಗೆದುಕೊಂಡರು.

ನಾಲ್ಕೈದು ದಿನಗಳಿಂದ ನೆಮ್ಮದಿ ಕೇಂದ್ರದಲ್ಲಿ ಕಂಪ್ಯೂಟರ್ ತೊಂದರೆ, ಕಾಟ್ರೇಜ್ ತೊಂದರೆ ಎಂದು ನೆಪ ಹೇಳುತ್ತಿರುವ ಸಿಬ್ಬಂದಿ, ದೂರದ ಊರುಗಳಿಂದ ಬರುವ ಜನರನ್ನು ನಿತ್ಯ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದು ಜನರು ದೂರಿದರು.

ಈ ವೇಳೆ ಮಾತನಾಡಿದ ರಾಜ್ಯ ಆದಿಜಾಂಭವ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ್‌ರಾಜ್‌ದಾಸ್, ಇದು ಒಂದು ವಾರದಿಂದಷ್ಟೇ ಉದ್ಭವಿಸಿರುವ ಸಮಸ್ಯೆ ಅಲ್ಲ. ಪ್ರತಿ ತಿಂಗಳ ಕೊನೆ ಮತ್ತು ಆರಂಭದಲ್ಲಿ ಈ ಸಮಸ್ಯೆ ಇದ್ದೇ ಇರುತ್ತದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.

ಹೋಬಳಿಯ ಯಾವುದೋ ಮೂಲೆಯಿಂದ ಇಲ್ಲಿಗೆ ನಿತ್ಯ ನೂರಾರು ಜನರು ವಿವಿಧ ಅರ್ಜಿಗಳನ್ನು ಹಿಡಿದು ವಿವಿಧ ಕೆಲಸಗಳಿಗಾಗಿ ಬರುತ್ತಾರೆ. ಆದರೆ, ಚಿಕ್ಕಪುಟ್ಟ ಸಮಸ್ಯೆಗಳನ್ನೇ ಮುಖ್ಯವಾಗಿಸಿಕೊಂಡು ಜನರು ವಾರಗಟ್ಟಲೇ ನೆಮ್ಮದಿ ಕೇಂದ್ರಗಳಿಗೆ ನೆಮ್ಮದಿಯಿಲ್ಲದೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ನಾಡಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗೋವಿಂದ್‌ರಾಜ್‌ದಾಸ್ ತಿಳಿಸಿದರು.

ಯುವಜನರ ಪರ ಚಿಂತನಾ ವೇದಿಕೆ ಅಧ್ಯಕ್ಷ ನಾರಾಯಣ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸರಳ ರಮಣಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.