ADVERTISEMENT

ಪಟ್ಟಣಕ್ಕೆಲ್ಲ ನೀರು ಬೇತು ಗ್ರಾಮದಲ್ಲಿ ತತ್ವಾರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 8:00 IST
Last Updated 12 ಅಕ್ಟೋಬರ್ 2011, 8:00 IST

ನಾಪೋಕ್ಲು: ಈ ಗ್ರಾಮದ ಸುತ್ತ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಒಂದೆಡೆ ಗ್ರಾಮದ ಅಂಚಿಗೆ ಒತ್ತಿಕೊಂಡಿರುವ ಕೊಟ್ಟಮುಡಿಯಲ್ಲಿ ಹರಿಯುವ ಕಾವೇರಿ, ಮತ್ತೊಂದು ಅಂಚಿನಲ್ಲಿ ಹರಿಯುವ ಕಕ್ಕಬ್ಬೆ ಹೊಳೆ. ಮಳೆಗಾಲದಲ್ಲಂತೂ ಸುತ್ತು ಜಲಾವೃತವಾಗಿ ಬೇತು ಗ್ರಾಮ ದ್ವೀಪವಾದಂತೆ ಅನಿಸುತ್ತದೆ.
 
ನಾಪೋಕ್ಲು ಪಟ್ಟಣಕ್ಕೆ ಪೂರ್ತಿ ನೀರು ಸರಬರಾಜು ಮಾಡುವ ಪಂಪ್ ಈ ಗ್ರಾಮದ ಸಸ್ಯಕ್ಷೇತ್ರದ ಬಳಿಯಿದೆ. ಬೇತು ಗ್ರಾಮಕ್ಕೆ ನೀರು ಸರಬರಾಜು ಮಾಡಲು ಸ್ವಜಲಧಾರಾ ಯೋಜನೆಯಡಿ ನಿರ್ಮಿಸಿರುವ ಬೃಹತ್ ನೀರಿನ ಟ್ಯಾಂಕ್ ಇದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ನೀರಿನ ಟ್ಯಾಂಕ್‌ಗಳಿವೆ. ಹೀಗಿದ್ದೂ ಗ್ರಾಮದಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದೆ.

 ಈ ಮಳೆಗಾಲದಲ್ಲಿ ಬೇತು ಗ್ರಾಮಕ್ಕೆ ಯಾವ ಕೊಳಾಯಿಯ ಮೂಲಕವೂ ನೀರು ಪೂರೈಕೆಯಾಗಿಲ್ಲ. ಗ್ರಾಮದ ಹೊಳೆಗಳಿಂದ ನಾಪೋಕ್ಲು ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದೆ. ಬೇತು ಗ್ರಾಮದ ಜನತೆಗೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಗ್ರಾಮದಲ್ಲಿ ಕೃಷಿ ಚಟುವಟಿಕೆಗಳು ಉತ್ತಮವಾಗಿ ಸಾಗುತ್ತಿದೆ.

ಸುಮಾರು 30 ಎಕರೆ ವಿಸ್ತೀರ್ಣದ ತೋಟಗಾರಿಕಾ ಸಸ್ಯಕ್ಷೇತ್ರ ಬೇತು ಗ್ರಾಮದಲ್ಲಿದೆ. ಕಿತ್ತಳೆಯ ಪುನಶ್ಚೇತನಕ್ಕಾಗಿ ಈ ಸಸ್ಯ ಕ್ಷೇತ್ರದಲ್ಲಿ 50 ಸಾವಿರ ಕಿತ್ತಳೆ ಗಿಡಗಳನ್ನು ಸಿದ್ದಪಡಿಸಿ ರೈತರಿಗೆ ವಿತರಿಸಲಾಗಿದೆ. ಮುಂದಿನ ವರ್ಷಕ್ಕೂ 50 ಸಾವಿರ ಕಿತ್ತಳೆ ಗಿಡಗಳನ್ನು ವಿತರಿಸಲು ನರ್ಸರಿಯನ್ನು ಸಿದ್ದಪಡಿಸಲಾಗಿದೆ. ಈ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳು ಗ್ರಾಮಸ್ಥರನ್ನು ಕಾಡುತ್ತಿದೆ.

ನಾಪೋಕ್ಲು ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟ ಬೇತು ಕೊಳಕೇರಿ ಮತ್ತು ನಾಪೋಕ್ಲು ಗ್ರಾಮಗಳಲ್ಲಿ ಬೇತು ಗ್ರಾಮವು ಸಾಕಷ್ಟು ವಿಶಾಲವಾಗಿದೆ. ಸರ್ಕಾರಿ, ಖಾಸಗಿ ಶಾಲೆಗಳು, ಪದವಿಪೂರ್ವಕಾಲೇಜು, ಪದವಿಕಾಲೇಜು ಎಲ್ಲವೂ ಈ ಗ್ರಾಮ ವ್ಯಾಪ್ತಿಯಲ್ಲಿದ್ದು ಶೈಕ್ಷಣಿಕವಾಗಿ ಮುಂದುವರಿದಿದೆ. ಗ್ರಾಮದ ಶ್ರಿಮಕ್ಕಿಶಾಸ್ತಾವು ದೇವಾಲಯ ಪ್ರಸಿದ್ಧಿ ಪಡೆದಿದೆ. ವರ್ಷಕ್ಕೆರಡು ಬಾರಿ ಈ ದೇವಾಲಯದಲ್ಲಿ ವಾರ್ಷಿಕ ಉತ್ಸವ ಜರುಗುತ್ತವೆ. ಉತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

 ಪಂಚಾಯಿತಿಯವರು ಗ್ರಾಮೀಣ ನೀರು ಸರಬರಾಜು ಯೋಜನೆಯ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಗ್ರಾಮಿಣ ಪ್ರದೇಶಕ್ಕೆ ಸರಿಯಾಗಿ ನೀರು ಸರಬರಾಜು ಮಾಡುವುದು ಜರೂರು ಅಗತ್ಯವಾಗಿದೆ ಎಂಬುದು ಗ್ರಾಮಸ್ಥರ ಬೇಡಿಕೆ. ಹಾಗೆಯೇ ಗ್ರಾಮದ ರಸ್ತೆಗಳು ಬಹಳಷ್ಟು ಹದಗೆಟ್ಟಿವೆ. ರಸ್ತೆಗಳನ್ನು ದುರಸ್ತಿಪಡಿಸುವುದು, ಸಮರ್ಪಕ ನಿರ್ವಹಣೆಗೆ ಅಗತ್ಯವಾದ ಚರಂಡಿಗಳನ್ನು ನಿರ್ಮಿಸುವುದು ಅದರಲ್ಲೂ ಮುಖ್ಯವಾಗಿ ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳುವುದು ತಕ್ಷಣ ಆಗಬೇಕಾದ ಕೆಲಸ ಎನ್ನುವುದು ಸ್ಥಳೀಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.