ADVERTISEMENT

ಪೊಲಿ ಪೊಲಿ ದೇವಾ ಪೊಲಿಯೋ ಬಾ..

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 6:41 IST
Last Updated 5 ಡಿಸೆಂಬರ್ 2017, 6:41 IST

ಕುಶಾಲನಗರ: ‘ಪೊಲಿ ಪೊಲಿ ದೇವಾ ಪೊಲಿಯೋ ಬಾ’ ಎಂದು ಕೂಗುತ್ತ ಒಡ್ಡೋಲಗದೊಂದಿಗೆ ಮೆರವಣಿಯಲ್ಲಿ ಸಾಗಿ ಧಾನ್ಯಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಮೂಲಕ ಭಾನುವಾರ ರಾತ್ರಿ ಪಟ್ಟಣದಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಯಿತು.

ಸ್ಥಳೀಯ ಕೊಡವ ಸಮಾಜ ಮತ್ತು ಗೌಡ ಸಮಾಜದ ವತಿಯಿಂದ ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ (ಸುಗ್ಗಿಯ ಹಬ್ಬ ಪುತ್ತರಿ) ಹುತ್ತರಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ನೇತೃತ್ವದಲ್ಲಿ ಸಮಾಜದವರು ಸಂಪ್ರಾದಾಯಿಕ ಉಡುಗೆ ತೊಡುಗೆ ಧರಿಸಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಕೊಡವ ಸಮಾಜದ ಸಭಾಂಗಣದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ನೆಲ್ಲಕ್ಕಿಯಡಿಯಲ್ಲಿ 5 ಬಗೆಯ ಮರದ ಎಲೆಗಳಿಂದ ನೆರೆಕಟ್ಟಿ ನಂತರ ಸಿದ್ಧಪಡಿಸಲಾದ ಕುತ್ತಿಯನ್ನು ಹೊತ್ತು ಕೋವಿ, ಒಡಿಕತ್ತಿ, ದುಡಿಕೊಟ್ಟ್ ಪಾಟ್ ಹಾಗೂ ಒಡ್ಡೋಲಗದೊಂದಿಗೆ ಗದ್ದೆಗೆ ತೆರಳಲಾಯಿತು. ಮೊದಲಿಗೆ ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ಸಮಾಜದ ಹಿಂಭಾಗದಲ್ಲಿರುವ ಗದ್ದೆಯಲ್ಲಿ ಬಲ್ಲರಂಡ ಜಾಲಿತಮ್ಮಯ್ಯ ಅವರು ಪೂಜೆ ಸಲ್ಲಿಸಿ ಕದಿರು ತೆಗೆಯುವ ಮೂಲಕ ಪುತ್ತರಿ ನಮ್ಮೆ ಆಚರಿಸಲಾಯಿತು.

ಎಲ್ಲರೂ ‘ಪೊಲಿ ಪೊಲಿ ದೇವಾ ಪೊಲಿಯೇ ಬಾ’ ಎಂಬ ಘೋಷಣೆ ಕೂಗಿದರು. ಧಾನ್ಯಲಕ್ಷ್ಮಿಯನ್ನು ಮೆರವಣಿಗೆ ಮೂಲಕ ತಂದು ದೇವರ ಬಳಿ ಕದಿರನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ತಮ್ಮ ತಮ್ಮ ಮನೆಗೆ ಧಾನ್ಯಲಕ್ಷ್ಮಿಯನ್ನು ತುಂಬಿಸಿಕೊಂಡರು. ಕೊಯ್ದ ಕದಿರನ್ನು ಎಲ್ಲರಿಗೂ ವಿತರಿಸಲಾಯಿತು.

ಸಮಾಜದ ಗೌರವ ಕಾರ್ಯದರ್ಶಿ ಪುಲಿಯಂಡ ಎಂ.ಚಂಗಪ್ಪ, ಖಜಾಂಜಿ ದೇವಯ್ಯ, ಮಾಜಿ ಅಧ್ಯಕ್ಷ ಮೇವಡ ಚಿಂಗಪ್ಪ, ನಿರ್ದೇಶಕರಾದ ತಮ್ಮಯ್ಯ, ಪ್ರಮೋದ್ ಮುತ್ತಪ್ಪ, ಸುಬ್ರಮಣಿ, ಕಿಟ್ಟಿಸೋಮಯ್ಯ, ಸೋಮಣ್ಣ, ಚಿಟ್ಟಿಯಪ್ಪ, ಪೊನ್ನಣ್ಣ, ಕನ್ನಿಕಾ, ದಯಾನಂದ್ ಪಾಲ್ಗೊಂಡಿದ್ದರು. ಗೌಡ ಸಮಾಜದಿಂದ ಆಚರಣೆ: ಇಲ್ಲಿನ ಗೌಡ ಸಮಾಜದ ವತಿಯಿಂದ ಹುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಮಾಜದ ಮುಖಂಡ ಕುಲ್ಲಚೆಟ್ಟಿ ಕಾಶಿ ಪೂವಯ್ಯ ಪೂಜೆ ಸಲ್ಲಿಸಿ ಕದಿರು ತೆಗೆದರು. ಅಧ್ಯಕ್ಷ ಕೆಚ್ಚಪ್ಪನ ಮೋಹನ್, ಉಪಾಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಕಾರ್ಯದರ್ಶಿ ಬೈಮಾನ ಪೊನ್ನಪ್ಪ, ಸಹ ಕಾರ್ಯದರ್ಶಿ ಅಲಗುಂಜಿ ಕೃಷ್ಣಮೂರ್ತಿ, ಕೂರನ ಪ್ರಕಾಶ್, ಪಂಜಿಪಳ್ಳ ಯತೀಶ್, ಚೇರಿಯಮನೆ ಹರೀಶ್, ಮುಖಂಡರಾದ ಪೊನ್ನಚ್ಚನ ಮೋಹನ್, ಆನಂದ ಕರಂದ್ಲಜೆ , ಕವಿತಾ ಮೋಹನ್, ಕುಯ್ಯಮುಡಿ ಸುರೇಶ್, ಬೈಮಾನ ಬೋಜಮ್ಮ, ಕೆಚ್ಚಪ್ಪನ ಪ್ರಮೀಳಾ, ಮಾಜಿ ಸೈನಿಕರಾದ ಸುಳ್ಯಕೊಡಿ ಮಾದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.