
ಮಡಿಕೇರಿ: ದೇಶ ಕಂಡ ಮಹಾನ್ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರಿಗೆ ಪ್ರಾಥಮಿಕ ಶಿಕ್ಷಣ ನೀಡಿದ ಇಲ್ಲಿನ ಶಾಂತಿ ಚರ್ಚಿನ ಆವರಣದಲ್ಲಿರುವ ‘ನಗರಸಭೆಯ ಪ್ರಾಥಮಿಕ ಶಾಲೆ’ ಶತಮಾನವನ್ನು ಪೂರೈಸಿ, ದಾಪುಗಾಲು ಹಾಕಿದೆ.
19ನೇ ಶತಮಾನದಲ್ಲಿದ್ದ ಆಂಗ್ಲೊ–ಇಂಡಿಯನ್ನರ ಕಾಲಾವಧಿಯಲ್ಲಿ ಮಡಿಕೇರಿ ಯಲ್ಲಿಯೇ ಪ್ರಥಮವಾಗಿ ಆರಂಭಗೊಂಡ ಈ ಶಾಲೆ, ಇದುವರೆಗೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಬಂದಿದೆ. ಶಾಲೆಯ ದಾಖಲಾತಿ ಪ್ರಕಾರ 1907 ರಿಂದ ಆರಂಭವಾಗಿದ್ದರೆ, ಇದಕ್ಕಿಂತಲೂ ಹಿಂದಿನಿಂದ ಶಾಲೆ ಕಾರ್ಯನಿರ್ವಹಿಸುತ್ತಿತ್ತು ಎಂದು ಕೆಲವು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಆಂಗ್ಲರು, ಸ್ವಾತಂತ್ರ್ಯದ ನಂತರ ಪುರಸಭೆ, ಈಗ ನಗರಸಭೆಯ ಸುಪರ್ದಿಯಲ್ಲಿ ನಡೆಯುತ್ತಿದೆ.
ಶಾಲೆಗೆ ಸರ್ಕಾರದಿಂದ ಅನುದಾನ ಬರುತ್ತಿದ್ದು, ಪ್ರಸ್ತುತ ಮೂವರು ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರಿದ್ದು, 1ರಿಂದ 7ನೇ ತರಗತಿಯಲ್ಲಿ ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 43 ಮಕ್ಕಳಿಗೆ ಪಾಠ ಪ್ರವಚನ ಮಾಡುತ್ತಿದ್ದಾರೆ.
ಶಾಲೆಗೆ ಸೇರಿದ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಇತ್ತೀಚಿನ ಖಾಸಗಿ ಶಾಲೆಗಳ ಪೈಪೋಟಿ ಹಾಗೂ ಆಂಗ್ಲ ಭಾಷೆಯ ವ್ಯಾಮೋಹದಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿಯಲ್ಲಿ ಇಳಿಮುಖವಾಗಿರುವುದು ವಿಷಾದದ ಸಂಗತಿ.
ಜಿಲ್ಲೆಯ ಪ್ರಮುಖ ಗಣ್ಯರಿಗೆ ಪ್ರಾಥಮಿಕ ಶಿಕ್ಷಣ ನೀಡಿದ ಖ್ಯಾತಿ ಪಡೆದಿರುವ ಈ ಶಾಲೆ 100 ವರ್ಷ ಪೂರೈಸಿದರು ಕೂಡ ಯಾವುದೇ ಶತಮಾನೋತ್ಸವ ಕಾರ್ಯಕ್ರಮವನ್ನಾಗಲಿ ಅಥವಾ ಇನ್ನಿತರ ಯಾವುದೇ ಸೌಲಭ್ಯಗಳನ್ನು ಒದಗಿಸುವತ್ತ ಜನಪ್ರತಿನಿಧಿಗಳಾಗಲಿ, ಜಿಲ್ಲಾಡಳಿತವಾಗಲಿ ಗಮನ ಹರಿಸದಿರುವುದು ವಿಪರ್ಯಾಸ.
ಈ ಹಿಂದಿದ್ದ 5 ಶಾಲಾ ಕೊಠಡಿಯಲ್ಲಿ 2 ಕೊಠಡಿಗಳು ನೆಲಸಮವಾಗಿದೆ. ಶಿಕ್ಷಕರ ಕೊರತೆಯ ಜೊತೆಗೆ ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಶಾಲೆಯನ್ನು ಮತ್ತಷ್ಟು ಉನ್ನತ್ತಿಯತ್ತ ಕೊಂಡೊಯ್ಯಲು ಬೇಕಾದ ಕ್ರಮಗಳನ್ನು ಕೈಗೊಂಡು ಹಿರಿಯರಿಗೆ ಶಿಕ್ಷಣ ನೀಡಿದ ಶಾಲೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಶಾಲೆಯಲ್ಲಿ ಕಲಿತ ಹಿರಿಯರು ಅಭಿಪ್ರಾಯಪಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.