ADVERTISEMENT

ಬಸವೇಶ್ವರ ಸ್ವಾಮಿ ಕೌಟೆಕಾಯಿ ಜಾತ್ರೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 9:28 IST
Last Updated 15 ನವೆಂಬರ್ 2017, 9:28 IST

ಶನಿವಾರಸಂತೆ: ಸಮೀಪದ ಹೊಸೂರು ಗ್ರಾಮದಲ್ಲಿ ಬೆಟ್ಟದ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಜೆಸಿಐ ಹೊಸೂರು ಬಸವೇಶ್ವರ ಸಹಭಾಗಿತ್ವದಲ್ಲಿ ಸೋಮವಾರ ಬೆಟ್ಟದ ಬಸವೇಶ್ವರ ಕೌಟೆಕಾಯಿ ಜಾತ್ರೆ ಶ್ರದ್ಧಾಭಕ್ತಿಯಿಂದ ಜರುಗಿತು.

ಐತಿಹಾಸಿಕ ಜಾತ್ರೆಗೆ 3 ಸಾವಿರಕ್ಕೂ ಹೆಚ್ಚು ಮಂದಿ ಸಾಕ್ಷಿಯಾದರು. ಜಾತ್ರೆ ಪ್ರಯುಕ್ತ ಬೆಟ್ಟದ ಬಸವೇಶ್ವರ ದೇವಾಲಯದಲ್ಲಿ ಬಸವೇಶ್ವರನಿಗೆ ಅರ್ಚಕರು ಕೌಟೆಕಾಯಿ ಮಾಲೆಯ ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವಾಲಯ ಪ್ರಾಂಗಣದಲ್ಲಿರುವ ಅರಳಿಕಟ್ಟೆ ಹಾಗೂ ಕೆಳಭಾಗದ ಸುಗ್ಗಿಕಟ್ಟೆಯನ್ನು ಕೌಟೆಕಾಯಿ ಮಾಲೆಯಿಂದ ಅಲಂಕರಿಸಲಾಗಿತ್ತು. ಸುಗ್ಗಿಕಟ್ಟೆಯ ಸುಗ್ಗಿ ದೇವರನ್ನು ಅಲಂಕರಿಸಿ, ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಅಲ್ಲಲ್ಲಿ ಕಟ್ಟಲಾಗಿದ್ದ ಬಾಳೆಕಂಬ, ಮಾವಿನೆಲೆಯ ತೋರಣಗಳಲ್ಲೂ ಕೌಟೆಕಾಯಿ ರಾರಾಜಿಸುತ್ತಿತ್ತು.

ADVERTISEMENT

ಕೌಟೆಕಾಯಿ ಮಹತ್ವ: ಹಿಂದೆ ಹೊಸೂರು ಗ್ರಾಮದಲ್ಲಿ ರೈತರೇ ಅಧಿಕ ಸಂಖ್ಯೆಯಲ್ಲಿದ್ದು ಗೋವುಗಳೇ ಅವರ ಸಂಪತ್ತಾಗಿತ್ತು. ಕಾಯಿಲೆ ತಲೆದೋರಿದಾಗ ಗೋವುಗಳಿಗೆ ನೈಸರ್ಗಿಕವಾಗಿ ಬೆಳೆದ ನಂಜು ಶಮನಕಾರಿಯಾದ ಕೌಟೆಕಾಯಿಯನ್ನು ಔಷಧಿಯಾಗಿ ಬಳಸುತ್ತಿದ್ದರಂತೆ. ಉಗುರು ಸುತ್ತಾದ ಕೈಬೆರಳಿಗೆ ಕೌಟೆಕಾಯಿ ರಾಮಬಾಣವಾಗಿದ್ದು ಅದನ್ನು ರಂಧ್ರಮಾಡಿ ಬೆರಳಿಗೆ ಅಂಟಿಸಿಕೊಳ್ಳುತ್ತಿದ್ದರಂತೆ. ಕಾಯಿಲೆ ಬಂದಾಗ ಬೆಟ್ಟದ ಬಸವೇಶ್ವರ ಸ್ವಾಮಿಗೆ ಕಾಯಿಲೆ ಬೇಗ ಗುಣವಾದರೆ ಕೌಟೆಕಾಯಿ ಮಾಲೆ ಮಾಡಿ ಅರ್ಪಿಸುವುದಾಗಿ ಹರಕೆ ಮಾಡಿಕೊಳ್ಳುತ್ತಿದ್ದರು.

20 ವರ್ಷಗಳಿಂದ ಪ್ರತಿ ವರ್ಷ ದೀಪಾವಳಿ ಹಬ್ಬ ಮುಗಿದ ನಂತರ ಬೆಟ್ಟದ ಬಸವೇಶ್ವರ ದೇವಾಲಯ ಪ್ರಾಂಗಣದಲ್ಲಿ ಕೌಟೆಕಾಯಿ ಜಾತ್ರೆ ನಡೆದು ಬರುತ್ತಿದೆ. ದೀಪಾವಳಿ ಹಬ್ಬದ ದಿನಗಳಲ್ಲಿ ಕೌಟೆಕಾಯಿಯನ್ನು 2 ಭಾಗ ಮಾಡಿ ಒಳಗಿನ ತಿರುಳು ತೆಗೆದು ದೇವರಿಗೆ ದೀಪ ಬೆಳಗಿಸುವ ಸಂಪ್ರದಾಯವಿತ್ತು ಎಂದು ಜೆಸಿಐ ಸ್ಥಾಪಕ ಅಧ್ಯಕ್ಷ ಎಚ್.ಕೆ.ರಮೇಶ್, ದೇವಸ್ಥಾನ ಸಮಿತಿಯ ಅಧ್ಯಕ್ಷ ಶಾಂತಮಲ್ಲಪ್ಪ, ಪದಾಧಿಕಾರಿಗಳಾದ ಎಚ್.ಕೆ.ಗಣೇಶ್, ಕಾರ್ಯದರ್ಶಿ ಕರುಣ್ ಕುಮಾರ್ , ನಾಗೇಶ್‌ ಮತ್ತಿತರ ಗ್ರಾಮದ ಹಿರಿಯರು ಹೇಳುತ್ತಾರೆ.

ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಸಮಾರಂಭದಲ್ಲಿ ಉಪನ್ಯಾಸಕ ಶರಣ್ ಅವರ ‘ಸಂಪರ್ಕ– 2017’ ಕೃತಿಯನ್ನು ಕೆಪಿಸಿಸಿ ಸದಸ್ಯ ಕೃಷ್ಣಪ್ಪ ಲೋಕಾರ್ಪಣೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.