ADVERTISEMENT

ಬಾಲಕನ ಜೀವ ಉಳಿಸಿದ ಶಾಲಾ ಬಾಲಕಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 7:29 IST
Last Updated 3 ಡಿಸೆಂಬರ್ 2013, 7:29 IST

ಸೋಮವಾರಪೇಟೆ: ಕೆರೆಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸಿದ್ದ ಬಾಲಕನೊಬ್ಬನ್ನು ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 8ನೇ ತರಗತಿಯ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿಯೊಬ್ಬಳು ರಕ್ಷಿಸಿದ್ದಾಳೆ.

ರಜೆಯ ದಿನವಾದ ಭಾನುವಾರ 3ನೇ ತರಗತಿ ವಿದ್ಯಾರ್ಥಿ ರೋಹಿತ್ ಬಿಳಿಕಿಕೊಪ್ಪದ ತನ್ನ ಮನೆಯಿಂದ ಕಿಬ್ಬೆಟ್ಟದಲ್ಲಿರುವ ಅಜ್ಜಿಯ ಮನೆಗೆ ತೆರಳಿದ್ದ. ಗ್ರಾಮದ ಕೆರೆಯೊಂದರ ಕಟ್ಟೆಯ ಮೇಲೆ ಆಟವಾಡಿಕೊಂಡು ನಡೆದು ಹೋಗುವ ಸಂದರ್ಭ, ಆಕಸ್ಮಿಕವಾಗಿ ನೀರಿಗೆ ಬಿದ್ದ. ಕೆರೆಯ ಸಮೀಪ ಮನೆಯೊಂದರ ಜಗಲಿಯಲ್ಲಿ ಓದುತ್ತ ಕುಳಿತಿದ್ದ ವಿದ್ಯಾರ್ಥಿನಿ ಕೆ.ಎಂ. ಶಾಂತಿ, ಕೆರೆಗೆ ಬಿದ್ದ ಶಬ್ದ ಕೇಳಿದೊಡನೆ ಧಾವಿಸಿ ಬಾಲಕನನ್ನು ಕಾಪಾಡಲು ಪ್ರಯತ್ನಿಸಿದಳು. ಅದು ವಿಫಲಳಾದಾಗ, ಸಮೀಪದ ಬೇಲಿಯಲ್ಲಿದ್ದ ಉದ್ದದ ಬಡಿಗೆಯನ್ನು ಬಾಲಕನ ಕೈಗೆ ನೀಡಿ ಆತನನ್ನು ಕೆರೆಯ ದಡಕ್ಕೆ ತರುವಲ್ಲಿ ಯಶಸ್ವಿಯಾದಳು. ಪ್ರಜ್ಞೆ ತಪ್ಪಿದ್ದ ಬಾಲಕನಿಗೆ ಆಕೆಯೇ ಪ್ರಥಮ ಚಿಕಿತ್ಸೆ ನೀಡಿ ಬಾಲಕನ ಹೊಟ್ಟೆಯಿಂದ ನೀರನ್ನು ಹೊರತೆಗೆದಳು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬಾಲಕಿ ಶಾಂತಿ, ಕಳೆದ ವರ್ಷ ಗೊರೂರಿನಲ್ಲಿ ನಡೆದ ‘ಅಡ್ವೆಂಚರ್ ಕ್ಯಾಂಪ್‌’ನಲ್ಲಿ ಪಾಲ್ಗೊಂಡು ಈಜು ಕಲಿತಿದ್ದೆ. ನೀರಿನಲ್ಲಿ ಮುಳುಗಿದಾಗ ವಹಿಸಬೇಕಾದ ಎಚ್ಚರಿಕೆಯ ಬಗ್ಗೆ  ತಿಳಿದಿತ್ತು. ತಮ್ಮನಂಥ ರೋಹಿತ್‌ನನ್ನು ಕಾಪಾಡಿದ ಹೆಮ್ಮೆ ಅನಿಸುತ್ತಿದೆ’ ಎಂದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.