ಮಡಿಕೇರಿ: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸೀಮೆಎಣ್ಣೆ–ಬೆಂಕಿಕಡ್ಡಿಯಿದ್ದಂತೆ. ಕೋಮುಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಈ ಪಕ್ಷಗಳಿಗೆ ಪಾಠ ಕಲಿಸಬೇಕಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಎಂ.ಸಿ. ನಾಣಯ್ಯ ವಿಶ್ವಾಸವ್ಯಕ್ತಪಡಿಸಿದರು.
ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ಜೆಡಿಎಸ್ ಅಲ್ಪಸಂಖ್ಯಾತರ ಜಾಗೃತಿ ಸಮಾವೇಶ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರಧಾನಿ ಅಭ್ಯರ್ಥಿಗಳೆಂದು ಹೇಳಲಾಗುತ್ತಿರುವ ಇಬ್ಬರು ವ್ಯಕ್ತಿಗಳ ನಡುವಿನ ವಾದ ವಿವಾದಗಳನ್ನು ಮಾಧ್ಯಮಗಳು ಕೇಂದ್ರಿಕರಿಸುತ್ತಿವೆ. ಆದರೆ ಸಂಸತ್ತಿನ 545 ಸ್ಥಾನಗಳಲ್ಲಿ 272 ಸ್ಥಾನ ಗಳಿಸಿದ ಪಕ್ಷದವರು ಪ್ರಧಾನಿ ಆಗಲಿದ್ದಾರೆ. ಈ ಬಗ್ಗೆ ಎಲ್ಲರೂ ಅರಿಯಬೇಕು ಎಂದರು.
ತೃತೀಯ ರಂಗ ಕಟ್ಟುವ ನಿಟ್ಟಿನಲ್ಲಿ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ನೇತೃತ್ವದಲ್ಲಿ ರಾಜ್ಯದಾದ್ಯಂತ ಅಭಿಯಾನ ಆರಂಭವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಭರವಸೆ ವ್ಯಕ್ತಪಡಿಸಿದರು.ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ನರಮೇಧ ನಡೆಸಿದ ವ್ಯಕ್ತಿಯನ್ನೇ ಪ್ರಧಾನಿ ಎಂದು ಬಿಜೆಪಿ ಬಿಂಬಿಸುತ್ತಿದೆ. ಇದರಿಂದಾಗಿ ಶಾಂತಿ ನೆಮ್ಮದಿ ಬಯಸುವ ದೇಶದ ಜನರು ತೃತೀಯ ರಂಗದತ್ತ ಆಶಾ ಭಾವನೆ ಹೊಂದಿದ್ದಾರೆ ಎಂದರು.
ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಯ್ಯದ್ ಮೊಯಿನ್ ಅಲ್ತಾಫ್, ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಮಾತನಾಡಿದರು. ಪಕ್ಷದ ಜಿಲ್ಲಾ ವಕ್ತಾರ ಎಸ್.ಐ. ಮುನೀರ್ ಅಹ್ಮದ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮನ್ಸೂರ್ ಅಲಿ, ಯುವಜನತಾ ದಳದ ಕಾರ್ಯದರ್ಶಿ ಮೊಹಮ್ಮದ್ ಅವರು ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನ ಹೊಂದಿದ ಪಕ್ಷದ ಹಿರಿಯ ಮುಖಂಡ ದಿವಂಗತ ದಂಬೆಕೋಡಿ ಎಸ್.ಮಾದಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.