ADVERTISEMENT

ಬೆಂಬಳೂರು: ಒಪ್ಪೊತ್ತಿನ ಜಾತ್ರೆಗೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 10:35 IST
Last Updated 18 ಜನವರಿ 2012, 10:35 IST

ಶನಿವಾರಸಂತೆ: ಇಲ್ಲಿಗೆ ಸಮೀಪದ ಬೆಂಬಳೂರು ಗ್ರಾಮದಲ್ಲಿ ಬಾಣಂತಮ್ಮದೇವಿ ಹಾಗೂ ಕುಮಾರಲಿಂಗೇಶ್ವರ ಜಾತ್ರೆ ಸೋಮವಾರ ಸಂಭ್ರಮದಿಂದ ನಡೆಯಿತು.

ಬಾಣಂತಮ್ಮ ಕಲ್ಲೇಶ್ವರ ದೇವಸ್ಥಾನ, ಕಲ್ಲೇಶ್ವರ ಯುವಕ ಸಂಘ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ನಡೆದ ಜಾತ್ರೆಗೆ ಗ್ರಾಮದವರು ಮಾತ್ರವಲ್ಲದೇ ಶನಿವಾರಸಂತೆ, ಕೊಡ್ಲಿಪೇಟೆ ಹಾಗೂ ಯಸಳೂರು ಗ್ರಾಮಗಳಿಂದಲೂ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು. ಗ್ರಾಮದ ಕೆರೆಯಲ್ಲಿ ಬಾಣಂತಮ್ಮನಿಗೆ ಸ್ನಾನ ಮಾಡಿಸಿ, ನಂತರ ಮೆರವಣಿಗೆಯಲ್ಲಿ ತಂದು ಜಾತ್ರಾ ಮೈದಾನದ ಗುಡಿಯಲ್ಲಿ ಇರಿಸಲಾಯಿತು. ಬಳಿಕ ಅಲಂಕಾರ ಮಾಡಿ, ಪೂಜಾ ವಿಧಿ ನೆರವೇರಿಸಲಾಯಿತು. ಭಕ್ತರು ಮಧ್ಯಾಹ್ನದವರೆಗೂ ಸಾಲುಗಟ್ಟಿ ನಿಂತು, ಹಣ್ಣುಕಾಯಿ ಮಾಡಿಸಿ, ಬಾಗಿನ, ಹರಕೆ ಸಲ್ಲಿಸಿದರು. ಬಳಿಕ ಬಾಣಂತಮ್ಮನನ್ನು ಮಂಗಳವಾದ್ಯದೊಂದಿಗೆ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಯಿತು.

ಮಕರ ಸಂಕ್ರಾಂತಿ ದಿನ ಉಪವಾಸ ವ್ರತ ಆಚರಿಸುವ ಗ್ರಾಮಸ್ಥರು ಸೋಮವಾರ ಬೆಳಗಿನ ಜಾವ ಹರಕೆಯ ರೂಪದಲ್ಲಿ ಬಂದ ದವಸಧಾನ್ಯ, ತರಕಾರಿ ಮತ್ತಿತರ ವಸ್ತುಗಳನ್ನು ಮೆರವಣಿಗೆಯಲ್ಲಿ ಕೆರೆ ಬಳಿ ತಂದು ಅಡುಗೆ ಮಾಡಿದರು. ಬಾಣಂತಮ್ಮ ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ಅದನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡಿದರು.

ಮಧ್ಯಾಹ್ನದ ಬಳಿಕ
ಬಾಣಂತಮ್ಮನ ಮಗ ಕುಮಾರಲಿಂಗೇಶ್ವರನ ಒಪ್ಪೊತ್ತಿನ ಜಾತ್ರೆ ನಡೆಯಿತು. ಕುಮಾರಲಿಂಗೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ, ಪಲ್ಲಕ್ಕಿ ಹೊತ್ತವರು ಕುಂಟುತ್ತಲೆ ಮೆರವಣಿಗೆಯಲ್ಲಿ ಗುಡಿಗೆ ತಂದರು. ಸಂಜೆ 5 ಗಂಟೆ ಬಳಿಕ ಮರಳಿ ದೇವಸ್ಥಾನಕ್ಕೆ ಕೊಂಡೊಯ್ದು ಇರಿಸಿದರು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.