ADVERTISEMENT

ಮಕ್ಕಳಿಗಾಗಿ ವಿಶೇಷ ಕಾನೂನು: ಪ್ರಚಾರದ ಕೊರತೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 9:20 IST
Last Updated 6 ಆಗಸ್ಟ್ 2012, 9:20 IST

ಮಡಿಕೇರಿ: ಮಕ್ಕಳ ರಕ್ಷಣೆಗಾಗಿ ಸಂವಿಧಾನದಲ್ಲಿ ವಿಶೇಷ ಕಾನೂನುಗಳಿವೆ. ಇವುಗಳನ್ನು ಜನರಿಗೆ ತಿಳಿಸುವಂತಹ ಕೆಲಸ ನಡೆಯಬೇಕು ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಆರ್. ಸೋಮಶೇಖರ್ ಹೇಳಿದರು.

ನಗರದ ಲಯನ್ಸ್ ಕ್ಲಬ್‌ನ ಸಭಾಂಗಣದಲ್ಲಿ ಭಾನುವಾರ ಸ್ನೇಹಾಶ್ರಯ ಸಮಿತಿ, ಜಿಲ್ಲಾ ಕಾನೂನು ಸೇವಾ, ಮಹಿಳೋದಯ ಮಹಿಳಾ ಒಕ್ಕೂಟ ಓಡಿಪಿ ಸಂಸ್ಥೆ, ಲಯನ್ಸ್- ಲಯನೆಸ್ ಕ್ಲಬ್, ರೋಟರಿ ಮಿಸ್ಟ್ ಹಿಲ್ಸ್ ಮಡಿಕೇರಿ ಇವರ ಆಶ್ರಯದಲ್ಲಿ ನಡೆದ ಸ್ನೇಹಾಶ್ರಯ ಸಮಿತಿಯ 3ನೇ ವಾರ್ಷಿಕೋತ್ಸವ `ಮಕ್ಕಳ ಹಕ್ಕು~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಕ್ಷೇತ್ರದಲ್ಲಿರುವ ನನಗೇ ಹಲವು ವರ್ಷಗಳಿಂದಲೂ ಮಕ್ಕಳಿಗೆ ಇರುವ ವಿಶೇಷ ಕಾನೂನುಗಳ ಬಗ್ಗೆ ಅರಿವು ಇರಲಿಲ್ಲ. ಮಕ್ಕಳ ಅಪರಾಧದ ಬಗ್ಗೆ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳಿವೆ ಎಂದು ಅವರು ಹೇಳಿದರು.

ಮಕ್ಕಳಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಮಕ್ಕಳ ಮನೋತಜ್ಞರನ್ನು, ಮಕ್ಕಳ ವೈದ್ಯರನ್ನು ಸಾಮಾಜಿಕ ತಜ್ಞರನ್ನು, ಆಧ್ಯಾತ್ಮಿಕ ಸಾಧಕರನ್ನು ಸಂಪರ್ಕಿಸಿ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾವತಿ ಮಾತನಾಡಿ, ಮಕ್ಕಳಲ್ಲಿ ಏನಾದರೂ ಕುಂದುಕೊರತೆಗಳು ಕಂಡು ಬಂದರೆ ಅದಕ್ಕೆ ಪಾಲಕರು ಹಾಗೂ ಸಮಾಜವೇ ಕಾರಣ ಎಂದರು.

ಸ್ನೇಹಾಶ್ರಯ ಸಮಿತಿ ಅಧ್ಯಕ್ಷರು ಹಾಗೂ ಓ.ಡಿ.ಪಿ. ಸಂಸ್ಥೆ ನಿರ್ದೇಶಕ ಕ್ರೈಸ್ತ ಪಾದ್ರಿ ಕ್ಷೇವಿಯರ್ ಅಧ್ಯಕ್ಷತೆ ವಹಿಸಿದ್ದರು. ಸಂತ ಮೈಕಲರ ಚರ್ಚ್‌ನ ಧರ್ಮಗುರು ಚಾರ್ಲ್ ಜೋಸೆಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸಿದ್ಧಯ್ಯ, ಪತ್ರಕರ್ತ ಬಿ.ಜಿ. ಅನಂತಶಯನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.