ADVERTISEMENT

ಮನವೊಲಿಕೆಗೆ ಮುಂದಾದ ಡಿಕೆಶಿ

ಬಂಡಾಯ ಅಭ್ಯರ್ಥಿಗಳಿಗೆ ಖುದ್ದು ಕರೆ, ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲೂ ಬಿರುಸಿನ ಚಟುವಟಿಕೆ

ಅದಿತ್ಯ ಕೆ.ಎ.
Published 26 ಏಪ್ರಿಲ್ 2018, 12:05 IST
Last Updated 26 ಏಪ್ರಿಲ್ 2018, 12:05 IST

ಮಡಿಕೇರಿ: ಮಡಿಕೇರಿ ಕ್ಷೇತ್ರದಿಂದ ನಾಪಂಡ ಮುತ್ತಪ್ಪ, ವಿರಾಜಪೇಟೆ ಕ್ಷೇತ್ರದಿಂದ ಹರೀಶ್‌ ಬೋಪಣ್ಣ ಹಾಗೂ ಪದ್ಮಿನಿ ಪೊನ್ನಪ್ಪ ಅವರು ಬಂಡಾಯವೆದ್ದು ನಾಮಪತ್ರ ಸಲ್ಲಿಸಿರುವುದು ಕಾಂಗ್ರೆಸ್‌ಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

ನಾಪಂಡ ಮುತ್ತಪ್ಪ ಅವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯೆಂದು ‘ಬಿ– ಫಾರಂ’ ಲಗತ್ತಿಸದೇ ಸಲ್ಲಿಸಿದ್ದ ನಾಮಪತ್ರ ಮಾತ್ರ ತಿರಸ್ಕೃತವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದ್ದು, ಮಡಿಕೇರಿ ಕ್ಷೇತ್ರದ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರಿಗೆ ನಡುಕ ಶುರುವಾಗಿದೆ.

ಮತ್ತೊಂದೆಡೆ ವಿರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳಾದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌.ಸೀತಾರಾಂ ಆಪ್ತ ಹರೀಶ್‌ ಬೋಪಣ್ಣ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅವರ ನಾಮಪತ್ರವೂ ಅಂಗೀಕಾರವಾಗಿದೆ. ಅವರೆಲ್ಲರೂ ಕಣದಲ್ಲಿ ಉಳಿದರೆ ‘ಕೈ’ ಪಕ್ಷದ ಮತಗಳು ಹಂಚಿ ಹೋಗುವ ಸಾಧ್ಯತೆಯಿದೆ. ಅದಕ್ಕಾಗಿ ಜಿಲ್ಲಾ ಮುಖಂಡರು ಸೇರಿದಂತೆ ರಾಜ್ಯ ನಾಯಕರು ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಕಸರತ್ತಿಗೆ ಮುಂದಾಗಿದ್ದಾರೆ.

ADVERTISEMENT

ಅಖಾಡಕ್ಕೆ ಇಳಿದ ಡಿಕೆಶಿ: ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರೇ ಬಂಡಾಯ ಅಭ್ಯರ್ಥಿಗಳ ಮನವೊಲಿಕೆಯ ಕಸರತ್ತಿಗೆ ಇಳಿದಿದ್ದಾರೆ. ನಾಪಂಡ ಮುತ್ತಪ್ಪಗೆ ಶಿವಕುಮಾರ್‌ ಖುದ್ದು ಕರೆ ಮಾಡಿ ನಾಮಪತ್ರ ವಾಪಸ್‌ ಪಡೆಯುವಂತೆ ಕೋರಿದ್ದಾರೆ ಎಂದು ಗೊತ್ತಾಗಿದೆ.

‘ಬಹಳ ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಇದ್ದೀರಾ? ನಿಮ್ಮ ಬೆಂಬಲ ಅಗತ್ಯವಿದೆ. ನಿಮಗೇ ಬಿ– ಫಾರಂ ನೀಡಬೇಕಿತ್ತು. ಕೊನೆ ಕ್ಷಣದಲ್ಲಿ ಆದ ಗೊಂದಲದಿಂದ ನಿಮ್ಮನ್ನು ಅಭ್ಯರ್ಥಿಯಾಗಿಸಲು ಸಾಧ್ಯವಾಗಿಲ್ಲ’ ಎಂದು ಮನವೊಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಂದ್ರಕಲಾಗೆ ಬೆಂಬಲ ಸಾಧ್ಯತೆ?: ಇದೇ 27ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೊಡಗು ಜಿಲ್ಲೆಯ ಪ್ರವಾಸ ಹಮ್ಮಿಕೊಂಡಿದ್ದು, ಅಷ್ಟರಲ್ಲಿ ನಾಪಂಡ ಮುತ್ತಪ್ಪ ಅವರು ನಾಮಪತ್ರ ವಾಪಸ್‌ ಪಡೆದು ಪಕ್ಷದ ಅಧಿಕೃತ ಅಭ್ಯರ್ಥಿ ಚಂದ್ರಕಲಾ ಅವರಿಗೆ ಬೆಂಬಲ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ.

ಕಡಿಮೆಯಾಗದ ಸಿಟ್ಟು!: ವಿರಾಜಪೇಟೆಯಲ್ಲಿ ಬಂಡಾಯ ಅಭ್ಯರ್ಥಿಗಳ ಸಿಟ್ಟು ಇನ್ನೂ ಕಡಿಮೆಯಾಗಿಲ್ಲ. ಪದ್ಮಿನಿ ಪೊನ್ನಪ್ಪ ಹಾಗೂ ಹರೀಶ್‌ ಬೋಪಣ್ಣ ಅವರೊಂದಿಗೆ ರಾಜ್ಯ ವರಿಷ್ಠರು ಇದುವರೆಗೂ ಮಾತುಕತೆ ನಡೆಸಿಲ್ಲ. ವರಿಷ್ಠರ ನಡೆ ಅವರನ್ನು ಮತ್ತಷ್ಟು ಕೋಪಗೊಳ್ಳವಂತೆ ಮಾಡಿದೆ.

ಸಂಧಾನ ಸಾಧ್ಯವಾಗದಿದ್ದರೆ ಇಬ್ಬರೂ ಕಣದಲ್ಲಿ ಉಳಿಯಲು ನಿರ್ಧರಿಸಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ ಶಿವು ಮಾದಪ್ಪ ಅವರು ಬುಧವಾರ ಸಭೆ ನಡೆಸಿ, ಬಂಡಾಯ ಶಮನಗೊಳಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಮಿಟ್ಟು ಚೆಂಗಪ್ಪ ಅವರ ಮನೆಯಲ್ಲೂ ಒಂದು ಸುತ್ತಿನ ಮಾತುಕತೆ ನಡೆದಿದೆ. ಜಿಲ್ಲಾ ಮುಖಂಡರು ಸೇರಿದಂತೆ ಅಧಿಕೃತ ಅಭ್ಯರ್ಥಿ ಅರುಣ್‌ ಮಾಚಯ್ಯ ಅವರು ಬಂಡಾಯ ಅಭ್ಯರ್ಥಿಗಳೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲ್ಲೂಕು ಕೇಂದ್ರ ಘೋಷಣೆ ಮಾಡಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ರತಿವರ್ಷ ನೀಡುತ್ತಿದ್ದ ₹ 50 ಕೋಟಿ ಪ್ಯಾಕೇಜ್‌ ಪ್ರತಿವರ್ಷ ಘೋಷಣೆ ಮಾಡಬೇಕು. ಈಗಾಗಲೇ ಭರವಸೆ ನೀಡಿದಂತೆ ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಸ್ಪಂದಿಸಬೇಕು. ಈ ಬೇಡಿಕೆ ಈಡೇರಿಸುವ ಭರವಸೆ ನೀಡಿದರೆ ಮಾತ್ರ ನಾಮಪತ್ರ ವಾಪಸ್‌ ಪಡೆಯುತ್ತೇನೆ. ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡುತ್ತೇನೆ’ ಎಂದು ಹರೀಶ್‌ ಬೋಪಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

**
ಗುರುವಾರ ಮಧ್ಯಾಹ್ನ ಬೆಂಬಲಿಗರ ಸಭೆ ಕರೆಯಲಾಗಿದ್ದು ಅಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಐಎನ್‌ಟಿಯುಸಿ ರಾಷ್ಟ್ರೀಯ ಅಧ್ಯಕ್ಷರು ಸೂಚಿಸಿದರೆ ಮಾತ್ರ ಕಣದಿಂದ ಹಿಂದೆ ಸರಿಯುತ್ತೇನೆ
– ನಾಪಂಡ ಮುತ್ತಪ್ಪ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ

**
ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರೆ ಮಾತ್ರ, ನಾಮಪತ್ರ ವಾಪಸ್‌ ಪಡೆಯುತ್ತೇನೆ. ಇಲ್ಲದಿದ್ದರೆ ಸ್ಪರ್ಧೆಗೆ ಸಿದ್ಧವಿದ್ದೇನೆ
– ಹರೀಶ್‌ ಬೋಪಣ್ಣ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.