ADVERTISEMENT

ಮಳೆ ಅಭಾವ : ಹೊಗೆಸೊಪ್ಪು ಬೆಳೆಗಾರ ಕಂಗಾಲು

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 6:25 IST
Last Updated 7 ಜೂನ್ 2011, 6:25 IST

ಗೋಣಿಕೊಪ್ಪಲು:  ಧೋ ಎಂದು ಧಾರಾಕಾರವಾಗಿ ಮಳೆ ಸುರಿಯು ತ್ತಿದ್ದರೆ ಇತ್ತ ಕೊಡಗಿನ ಸೆರಗಿನಲ್ಲೆ ಇರುವ ಪಿರಿಯಾಪಟ್ಟಣ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಮಳೆಯ ತೀವ್ರ ಅಭಾವ ಕಾಣಿಸಿಕೊಂಡಿದೆ.

ಕೊಡಗಿನ ಕುಶಾಲನಗರದಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ದೊಡ್ಡನೇರಳೆ, ಚಿಕ್ಕನೇರಳೆ, ಬಿಳುಗುಲಿ, ಹಸುವಿನಕಾವಲು, ಚಪ್ಪರದಹಳ್ಳಿ ಮೊದಲಾದ ಕಡೆ ನೀರು ಹೊಯ್ದು ಕೊಂಡು ಹೊಗೆಸಸಿ ನೆಡುತ್ತಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕು ಹೊಗೆಸೊಪ್ಪು ಬೆಳೆಯುವ ಪ್ರಮುಖ ಕೇಂದ್ರ. ಈ ಹೊತ್ತಿಗೆ ಸಸಿನೆಟ್ಟು, ಗೊಬ್ಬರಕೊಟ್ಟು ವ್ಯವಸಾಯ ಮಾಡಬೇಕಿತ್ತು. ಆದರೆ ಈ ಬಾರಿ ವರ್ಷದ ಆರಂಭದಿಂದಲೂ ಸೂಕ್ತ ಮಳೆಯಾಗದೆ ರೈತರು ನಿತ್ಯವೂ ಆಕಾಶದ ಕಡೆಗೆ ಮುಖ ಮಾಡುವುದೇ ಆಗಿದೆ. ಕೊಡಗಿನಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದು ಮುಂಗಾರು ಆರಂಭಗೊಂಡು ನಿರಂತರವಾಗಿ ಮಳೆ ಸುರಿಯುತ್ತಿದೆ.

 ಆದರೆ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ, ಸತ್ಯಗಾಲ, ತಾತನಹಳ್ಳಿ ಮೊದಲಾದ ಗ್ರಾಮಗಳನ್ನು ಬಿಟ್ಟರೆ ಭಾಗಕ್ಕೆ ಸೂಕ್ತ ಮಳೆಯಾಗಿಲ್ಲ. ಉಳಿದ ಭಾಗದ ರೈತರು ಮಳೆಗಾಗಿ ಹಂಬಲಿಸುತ್ತಿದ್ದಾರೆ. ದಟ್ಟ ಮೋಡ ಕವಿದ ವಾತಾವರಣದಲ್ಲಿ ಪಶ್ಚಿಮದ ತಣ್ಣನೆಯ ಗಾಳಿ ಬೀಸಿ ತುಂತುರು ಮಳೆಯ ಹನಿಯಷ್ಟೆ ಭೂಮಿಗೆ ಬೀಳುತ್ತಿದೆ.

ಇದರಿಂದ ಭೂಮಿಗೆ ತೇವವಾಗುತ್ತಿಲ್ಲ. ಜತೆಗೆ ಆಗಾಗ್ಗೆ ಬಿಸಿಲು ಕೂಡ. ಹೀಗಾಗಿ ಈ ಭಾಗದ ರೈತರು ತಮ್ಮ  ಪ್ರಮುಖ ಬೆಳೆಯಾದ ಹೊಗೆಸಸಿ ನೆಡಲು ಕೆರೆ, ಬೋರ್‌ವೆಲ್ ಅಥವಾ ಬಾವಿಯ ನೀರನ್ನು ಅವಲಂಬಿಸಬೇಕಾದ ಅನಿವಾರ್ಯತೆ ಒದಗಿದೆ. ಡ್ರಂನಲ್ಲಿ ನೀರು ತುಂಬಿ ಕೊಂಡು ಎತ್ತಿನಗಾಡಿ ಮೂಲಕ  ಹೊಲಗಳಿಗೆ ಸಾಗಿಸಿ ಸಾಲುಗಳಿಗೆ ಹುಯ್ದು ಗಿಡ ನೆಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿರುವ ದೃಶ್ಯ.

 ಮಲೆನಾಡಿನ ಸೆರಗಿನಲ್ಲಿರುವ ಪಿರಿಯಾಪಟ್ಟಣ ತಾಲ್ಲೂಕು ತೀವ್ರ ಮಳೆಯ ಅಭಾವ ಎದುರಿಸುತ್ತಿರು ವುದಕ್ಕೆ ಪ್ರಮುಖ ಕಾರಣ ಸಂಪೂರ್ಣ ಬಯಲು ಸೀಮೆಯಾಗಿರುವುದು. ಸುಮಾರು 45 ವರ್ಷದಿಂದ ಹೊಗೆಸೊಪ್ಪು ಬೆಳೆಯುತ್ತಿರುವ ಈ ತಾಲ್ಲೂಕಿನಲ್ಲಿ ಮರಗಿಡಗಳನ್ನು ಬೇರು ಸಮೇತ ಕಿತ್ತು ಹಾಕಲಾಯಿತು.

ಹೊಗೆಸೊಪ್ಪು ಬೇಯಿಸುವುದಕ್ಕೆ ವಿಪರೀತ ಕಟ್ಟಿಗೆ ಬೇಕಾಗಿರುವುದರಿಂದ ಭವಿಷ್ಯದ ಬಗ್ಗೆ ಚಿಂತಿಸದ ಜನತೆ ಕೇವಲ ಹಣವೊಂದನ್ನೆ ಗುರಿಯಾಗಿಸಿ ಕೊಂಡು ಇರುವ ಗಿಡಮರಗಳನ್ನೆಲ್ಲ  ಕಡಿದು ಯಲು ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ಮಳೆ ಬೀಳುತ್ತಿದೆ. ಯಾವುದೋ ಕಾಲದಲ್ಲಿ ಮಳೆ ಬರುತ್ತದೆ. ಇಲ್ಲದಿದ್ದರೆ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.