ಮಡಿಕೇರಿ: ಮಾಜಿ ಯೋಧರಿಗೆ ನಿವೇಶನ ಮಂಜೂರಾತಿ ಕುರಿತಂತೆ ಆಕಾಂಕ್ಷಿಗಳೇ ನೇರವಾಗಿ ಬಂದು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಸಂಗ್ರಹಿಸುವಂತೆ ಯಾವೊಂದು ಸಂಘಟನೆಗೆ ಅಧಿಕಾರ ನೀಡಿಲ್ಲ ಎಂದು ತಹಶೀಲ್ದಾರ್ ಬಾಬು ರವೀಂದ್ರನಾಥ್ ಪಟೇಲ್ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಸಂಬಂಧ ಕೆಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರರು ಈ ಕಠಿಣ ಕ್ರಮ ಕೈಗೊಂಡಿದ್ದಾರೆ.
ಅರ್ಜಿದಾರರು ಗುಂಪಿನಲ್ಲಿ ಬರುವುದರಿಂದ ಕಚೇರಿಯ ದಿನ ನಿತ್ಯದ ಕಚೇರಿ ಕೆಲಸಕ್ಕೆ ತೊಂದರೆಯಾಗುತ್ತಿದೆ.
ಆದ್ದರಿಂದ ಏ.21 ರ ನಂತರ ಅರ್ಜಿ ಪಡೆಯಲು ತಾಲ್ಲೂಕು ಕಚೇರಿಯ ಸಿಬ್ಬಂದಿಗಳನ್ನು ನಿಗಧಿಗೊಳಿಸಲಾಗಿದೆ. ಈ ಬಗ್ಗೆ ಅರ್ಜಿ ಸ್ವೀಕರಿಸಲು ಯಾವುದೇ ಸಂಘ ಸಂಸ್ಥೆಗೆ ಜಿಲ್ಲಾ ಮಟ್ಟದಲ್ಲಿ ಅಧಿಕಾರ ನೀಡಿರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮಾಜಿ ಯೋಧರು, ಅರ್ಜಿದಾರರು ಅವರ ಅಹವಾಲುಗಳನ್ನು ಕಚೇರಿಯ ವೇಳೆಯಲ್ಲಿ ಬಂದು ನೀಡಬಹುದು. ಅವರ ಕೋರಿಕೆಯಂತೆ ಪರಿಶೀಲಿಸಿ ತೆಗೆದುಕೊಂಡ ಕ್ರಮದ ಬಗ್ಗೆ ವೈಯಕ್ತಿಕವಾಗಿ ಮಾಹಿತಿ ನೀಡಲಾಗುವುದು. ಇದರ ಹೆಸರಿನಲ್ಲಿ ಸಂಬಂಧಪಡದವರು ಯಾವುದೇ ರೀತಿಯಲ್ಲಿ ಸರ್ಕಾರಿ ಯಂತ್ರ ದುರುಪಯೋಗಪಡಿಸಿಕೊಂಡಲ್ಲಿ ಶಿಕ್ಷೆಗೊಳಪಡುತ್ತಾರೆಂದು ಈ ಮೂಲಕ ಎಚ್ಚರಿಕೆ ನೀಡಲಾಗಿದೆ.
ಕರ್ಣಂಗೇರಿ ಗ್ರಾಮದಲ್ಲಿ ನಿವೇಶನ ಮಂಜೂರಾತಿಗೆ ಕೋರಿ ಸುಮಾರು 2 ಸಾವಿರ ಅರ್ಜಿಗಳಿವೆಯೆಂದು ಮಾಜಿ ಯೋಧರು ಕೊಡಗು ಪ್ರಗತಿಪರ ಗೌಡ ಸಂಘದ ಪದಾಧಿಕಾರಿಗಳೊಂದಿಗೆ ಏ.13 ರಂದು ಕೊಡಗು ಜಿಲ್ಲಾಧಿಕಾರಿಯವರ ಮುಂದೆ ಅರ್ಜಿ ಸಲ್ಲಿಸಲು ತೆರಳ್ದ್ದಿದರು. ಆಗ ಜಿಲ್ಲಾಧಿಕಾರಿಯವರು ಈ ಬಗ್ಗೆ ಕ್ರಮ ವಹಿಸುವಂತೆ ಮಡಿಕೇರಿ ತಹಶೀಲ್ದಾರರಿಗೆ ನಿರ್ದೇಶನ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.