ADVERTISEMENT

ಮಾಜಿ ಯೋಧರಿಗೆ ಭೂಮಿ ನೀಡಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 6:20 IST
Last Updated 10 ಮಾರ್ಚ್ 2012, 6:20 IST

ಮಡಿಕೇರಿ: ಮಾಜಿ ಯೋಧರು, ಯೋಧರ ವಿಧವಾ ಪತ್ನಿಯರು ಮತ್ತು ಅವರ ಸಂಬಂಧಿಕರಿಗೆ ಸರ್ಕಾರಿ ಜಮೀನು ನೀಡಬೇಕೆಂದು ಒತ್ತಾಯಿಸಿದ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಪದಾಧಿಕಾರಿಗಳು ಹಾಗೂ ಮಾಜಿ ಸೈನಿಕರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ, ಕೊಡಗಿನಲ್ಲಿ ಮಾಜಿ ಯೋಧರಿಗೆ ಭೂ ಮಂಜೂರಾತಿಯಲ್ಲಿ ಪ್ರಥಮ ಆದ್ಯತೆ ಎಂಬ ಘೋಷಣೆ ಜಾರಿಗೆ ತರಬೇಕು. ಈ ಬಗ್ಗೆ ಗ್ರಾ.ಪಂ., ತಾ.ಪಂ. ಹಾಗೂ ಜಿ.ಪಂ. ನಿರ್ಣಯಕೈಗೊಳ್ಳಬೇಕು ಎಂದು    ಒತ್ತಾಯಿಸಿದರು.

ಸರ್ಕಾರದ ಯಾವುದೇ ವಸತಿ ಯೋಜನೆಯಾಗಿರಲಿ ಅದರಲ್ಲಿ ಮಾಜಿ ಸೈನಿಕರಿಗೆ ಮೊದಲ ಆದ್ಯತೆ ನೀಡಬೇಕು. ತಳ ಮಟ್ಟದ ಕಂದಾಯ ಅಧಿಕಾರಿಗಳು ಹೊರ ರಾಜ್ಯದ ವ್ಯಾಪಾರಿಗಳಿಂದ ಹಣ ಪಡೆದು ಅಕ್ರಮವಾಗಿ ಭೂಮಿಯನ್ನು ಮಾರಾಟ ಮಾಡುತ್ತಿರುವುದಾಗಿ ಅವರು ಆರೋಪಿಸಿದರು. 

ಪಂಜಾಬಿನ ಸಿಖ್ ಜನಾಂಗದ ಸೈನಿಕರನ್ನು ಪಂಜಾಬ್, ಜಮ್ಮು ಕಾಶ್ಮೀರಗಳಲ್ಲಿ  ಪೂಜ್ಯಭಾವದಿಂದ ನೆನೆಯುತ್ತಾರೆ. ಆದರೆ ಕೊಡಗಿನಲ್ಲಿ ಸೈನಿಕರನ್ನು ಕಡೆಗಣಿಸಲಾಗಿದೆ. ಫೀ.ಮಾ.ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಇವರುಗಳನ್ನು ಅವರ ಜನ್ಮ ದಿನ ಹಾಗೂ ಪುಣ್ಯತಿಥಿಯಂದು ಮಾತ್ರ ಸ್ಮರಿಸುವಂತಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.