ADVERTISEMENT

ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 6:00 IST
Last Updated 23 ಜನವರಿ 2012, 6:00 IST

ಸೋಮವಾರಪೇಟೆ: ಜಗತ್ತಿನಲ್ಲಿ ಮುಸ್ಲಿಮರೆಲ್ಲ ಭಯೋತ್ಪಾದಕರೆಂಬ ತಪ್ಪು ಕಲ್ಪನೆ ಇದೆ. ಆದರೆ ಶಾಂತಿಯನ್ನು ಬೋಧಿಸುವ ಇಸ್ಲಾಂ ಧರ್ಮದ ಅನುಯಾಯಿಗಳು ಭಯೋತ್ಪಾದಕರಾಗಲು ಸಾಧ್ಯವಿಲ್ಲ. ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ ಹಾಗೂ ಭಯೋತ್ಪಾದಕರೆಲ್ಲಾ ಮುಸ್ಲಿಮರಲ್ಲ ಎಂದು ಅರಸಿಕೆರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

 ಆಲೆಕಟ್ಟೆ ರಸ್ತೆಯ ಮಲಂಗ್ ಷಾವಲಿ ಯೂತ್ ಕಮಿಟಿ ವತಿಯಿಂದ ಭಾನುವಾರ ಇಲ್ಲಿನ ಕೊಡವ ಸಮಾಜದಲ್ಲಿ ಜನಾಬ್ ಸಯ್ಯದ್ ಶಮೀರಲಿ ಶಿಹಾಬ್ ತಂಙಳ್ ನೇತೃತ್ವದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಮತ್ತು ಭಾವೈಕ್ಯತಾ ಸಮಾವೇಶದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಜಗತ್ತಿಗೆ ಬಹುದೊಡ್ಡ ಕೊಡುಗೆ ನೀಡಿದ ಇಸ್ಲಾಂ ಧರ್ಮವು ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸಿದೆ ಎಂದರು.

ಅನ್ನದ ಬೆಲೆ ತಿಳಿದವನು ಮಾನವೀಯ ಮೌಲ್ಯದ ಸಂಕೇತ ವಾಗಿದ್ದು, ನೋವು, ನಲಿವು, ತೃಷೆ, ಹಸಿವು ಸಮಾನವಾಗಿ ಹಂಚಿಕೊಳ್ಳುವುದು ಭಾವೈಕ್ಯತೆಯಾಗಿದೆ. ಈ ನಿಟ್ಟಿನಲ್ಲಿ ಇಸ್ಲಾಂ ಧರ್ಮದಲ್ಲಿ ರಂಜಾನ್ ಮಾಸದ ಉಪವಾಸ ವ್ರತಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.

ಸಕಲ ಧರ್ಮಗಳ ಸಾರ ಒಂದೇ ಆಗಿದ್ದು, ಧರ್ಮಗಳು, ದಾರ್ಶನಿಕರು ಬೋಧಿಸಿರುವಂತೆ ಪ್ರತಿಯೊಬ್ಬರೂ ಅವರವರ ಧರ್ಮವನ್ನು ಪಾಲಿಸುವ ಮೂಲಕ ಪರಧರ್ಮ ಸಹಿಷ್ಣುತೆಯೊಂದಿಗೆ ಸನ್ಮಾರ್ಗದಲ್ಲಿ ನಡೆಯಬೇಕು. ಸಮಾಜದಲ್ಲಿ ಪರಸ್ಪರ ಭೇದ ಭಾವ ತೊರೆದು ಭಾರತೀಯರಾದ  ನಾವೆಲ್ಲಾ ಒಂದೇ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕೆಂದರು.

ಇಲ್ಲಿನ ಓ.ಎಲ್.ವಿ ಚರ್ಚ್‌ನ ಧರ್ಮಗುರು ಫಾದರ್ ರಾಯಪ್ಪ ಮಾತನಾಡಿ, ಧರ್ಮ ಧರ್ಮಗಳಲ್ಲಿ ಕಂದಕ ಸೃಷ್ಠಿಯಾಗುತ್ತಿರುವ ಸಂಧಿಗ್ದ ಪರಿಸ್ಥಿತಿಯಲ್ಲಿ ಪರಸ್ಪರ ನಂಬಿಕೆ, ವಿಶ್ವಾಸಗಳೊಂದಿಗೆ ಸಮಾಜದಲ್ಲಿ ಅನ್ಯೋನ್ಯತೆಯಿಂದ ಬದುಕುವುದರೊಂದಿಗೆ ಜೀವನ ಸಾರ್ಥಕಪಡಿಸಿಕೊಳ್ಳಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಸಲಹೆಗಾರ ಅಹಮ್ಮದ್ ವಹಿಸಿದ್ದರು. ಮಾಜಿ ಸಚಿವ ಬಿ.ಎ.ಜೀವಿಜಯ, ಜಿ ಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯ, ಮಾಜಿ ಸದಸ್ಯ ವಿ.ಪಿ.ಶಶಿಧರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಪ್ರದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚಂಗಪ್ಪ, ಜಲಾಲಿಯ ಮಸೀದಿ ಮಾಜಿ ಅಧ್ಯಕ್ಷ ಕೆ.ಎ.ಅಬ್ಬಾಸ್, ಮಾಜಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ (ಅಂದ್ರು), ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಯ್ಯದ್ ಇರ್ಫಾನ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಮಹೇಶ್, ಜಾಮಿಯ ಮಸೀದಿಯ ಅಧ್ಯಕ್ಷ ಎಂ.ಸಿ.ವಝೀರ್, ಖತೀಬರಾದ ಮಹಮ್ಮದ್ ಮಶ್‌ರೂರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.